Advertisement

ಉಪ್ಪುಕಳ: ಸೇತುವೆ ಶೀಘ್ರ ಸಂಚಾರಕ್ಕೆ ಮುಕ್ತ

02:55 PM Jun 04, 2023 | Team Udayavani |

ಸುಬ್ರಹ್ಮಣ್ಯ: ಕಳೆದ ಮಳೆಗಾಲದಲ್ಲಿ ಸೇತುವೆ ಇಲ್ಲದೆ, ಇದ್ದ ಮರದ ಪಾಲವೂ ನೆರೆ ನೀರಿಗೆ ಕೊಚ್ಚಿ ಹೋಗಿ ಸಂಪರ್ಕ ಕಳೆದುಕೊಂಡು ದ್ವೀಪದಂತಹ ಪ್ರದೇಶದಲ್ಲಿ ಸಿಲುಕಿದ್ದ ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾ.ಪಂ. ವ್ಯಾಪ್ತಿಯ ಬಾಳುಗೋಡು ಗ್ರಾಮದ ಉಪ್ಪುಕಳದಲ್ಲಿ ಸಂಪರ್ಕ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಅಂತಿಮ ಹಂತದಲ್ಲಿದೆ.

Advertisement

ಬಾಳುಗೋಡು ಗ್ರಾಮದ ಉಪ್ಪುಕಳ ಎಂಬ ಪ್ರದೇಶದಲ್ಲಿ ಉಪ್ಪುಕಳ ಹೊಳೆ ಹರಿಯುತ್ತಿದ್ದು, ಇಲ್ಲಿ ಮಳೆಗಾಲದಲ್ಲಿ ಹೊಳೆದಾಟಲು ಮರದ ಪಾಲ ನಿರ್ಮಿಸಿ ಜನರು ಸಂಪರ್ಕ ಬೆಸೆಯುತ್ತಿದ್ದರು. ಕಳೆದ ಹಲವು ವರ್ಷಗಳಿಂದ ಜನರು ಮಳೆಗಾಲದಲ್ಲಿ ಇದೇ ಪಾಲದಲ್ಲಿ ಭಯದ ನಡಿಗೆ ಜತೆಗೆ ಸಂಕಷ್ಟ ಬದುಕು ಸಾಗಿಸುತ್ತಾ ಬಂದಿದ್ದರು. ಸೇತುವೆ ನಿರ್ಮಿಸುವಂತೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಾ ಬಂದಿದ್ದರು. ಇಲ್ಲಿ ಸುಮಾರು 12 ಕುಟುಂಬಗಳು ಜೀವನ ಸಾಗಿಸುತ್ತಿದ್ದಾರೆ.

ಸಂಕಷ್ಟದ ಜೀವನ
ಕಳೆದ ಬಾರಿ ಮೊದಲ ಮಳೆಗೆ ಉಪ್ಪುಕಳದ ಮರದ ಪಾಲ ನೀರು ಪಾಲಾಗಿತ್ತು, ಬಳಿಕ ಸ್ಥಳೀಯರು ಮರದ ಶೌರ್ಯ ತಂಡದ ಸಹಕಾರದಲ್ಲಿ ಮರದ ಸೇತುವೆ ನಿರ್ಮಿಸಿದ್ದರು. ಆದರೆ ಕೆಲವು ದಿನಗಳಲ್ಲೇ ಮಳೆಗೆ ಆ ಮರದ ಸೇತುವೆಯೂ ನೀರು ಪಾಲಾಗಿತ್ತು, ಹೀಗೆ ನಿರ್ಮಿಸಿದ 3-4 ಮರದ ಪಾಲ ನೀರು ಪಾಲಾಗಿ ಅಲ್ಲಿನ ಜನ ಕೆಲವು ದಿನಗಳ ಕಾಲ ಹೊರ ಜಗತ್ತಿನಿಂದ ಬೇರ್ಪಟ್ಟ ಸ್ಥಿತಿಯಲ್ಲಿ ಜೀವನ ಸಾಗಿಸಿದ್ದರು. ಮರದ ಪಾಲ ನಿರ್ಮಾಣಕ್ಕೆ ಸಂಘ ಸಂಸ್ಥೆಗಳು, ಗ್ರಾಮಸ್ಥರು ಕೈಜೋಡಿಸಿದ್ದರು. ಅಂದಿನ ಶಾಸಕ ಎಸ್‌. ಅಂಗಾರ ಅವರು ಅಂದು ಭೇಟಿ ನೀಡಿದ್ದ ವೇಳೆ ಸೇತುವೆ ನಿರ್ಮಾಣದ ಭರವಸೆ ನೀಡಿದ್ದರು. ಅದರಂತೆ ಇದೀಗ ಸೇತುವೆ ನಿರ್ಮಾಣಗೊಂಡಿದೆ.

48 ಲ.ರೂ. ವೆಚ್ಚದ ಸೇತುವೆ
ಕಳೆದ ವರ್ಷ ಅಂದಿನ ಶಾಸಕ ಎಸ್‌. ಅಂಗಾರ ಅವರ ಶಿಫಾರಸಿನಂತೆ ಲೋಕೋಪಯೋಗಿ ಇಲಾಖೆಯ ಸಂಪರ್ಕ ಸೇತುವೆ ಯೋಜನೆಯಡಿ ಇಲ್ಲಿಗೆ ಸೇತುವೆ ನಿರ್ಮಾಣಕ್ಕೆ 48 ಲಕ್ಷ ರೂ. ಅನುದಾನ ಮಂಜೂರುಗೊಂಡಿತ್ತು, ಮಳೆಗಾಲದ ಮುಗಿದ ಸಂದರ್ಭದಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಪ್ರಭಾಕರ ಪುತ್ತೂರು ಎಂಬವರು ಕಾಮಗಾರಿ ನಿರ್ವಹಿಸಿದ್ದಾರೆ. ಈಗಾಗಲೇ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಎರಡು ಕಡೆ ರಸ್ತೆ ನಿರ್ಮಾಣ ಕಾಮಗಾರಿಯೂ ನಡೆದಿದ್ದು, ಅಂತಿಮ ಕೆಲಸ ಆಗಬೇಕಿದೆ. ಈ ಕೆಲಸ ಶೀಘ್ರ ನಡೆದು, ಜನತೆಗೆ ಸೇತುವೆ ಸಂಚಾರಕ್ಕೆ ಮುಕ್ತವಾಗಲಿದ್ದು, ಬಳಿಕ ಪಾಲದ ಮೇಲಿನ ನಡಿಗೆಗೆ ಮುಕ್ತಿ ಸಿಗಲಿದೆ.

ಪಾಲದ ಮೇಲಿನ
ನಡಿಗೆಗೆ ಮುಕ್ತಿ
ಇಲ್ಲಿನ ಜನ ಹಲವು ದಶಕಗಳಿಂದ ಮಳೆಗಾಲದಲ್ಲಿ ತುಂಬಿ ಹರಿಯುವ ಹೊಳೆಗೆ ನಿರ್ಮಿಸಿದ ಪಾಲದಲ್ಲೇ ಸಂಚರಿ ಸುತ್ತಿದ್ದರು. ವೃದ್ಧರು, ಶಾಲಾ ಮಕ್ಕಳು ಭಯದಲ್ಲೇ ನಡೆದಾಡುತ್ತಿದ್ದರು. ಮಳೆಗಾಲ ಆರಂಭದ ವೇಳೆ ಸ್ಥಳೀಯರೇ ತಮ್ಮ ಸಂಚಾರಕ್ಕೆ ಪಾಲ ನಿರ್ಮಿಸುತ್ತಾ ಬಂದಿದ್ದರು. ಇಲ್ಲಿನ ಸಮಸ್ಯೆ ಬಗ್ಗೆ ಉದಯವಾಣಿ ಸುದಿನದಲ್ಲಿ ವರದಿ ಪ್ರಕಟಗೊಂಡಿತ್ತು. ಇದೀಗ ಇಲ್ಲಿ ಸೇತುವೆ ನಿರ್ಮಾಣಗೊಂಡಿರುವುದರಿಂದ ಇಲ್ಲಿನ ಜನ ಸಂಪರ್ಕ ಕಡಿತದಿಂದ ಹಾಗೂ ಪಾಲದ ಮೇಲಿನ ನಡಿಗೆಯಿಂದಲೂ ಮುಕ್ತಿ ಪಡೆದಿದ್ದಾರೆ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next