ಶುರುವಾದಾಗಿನಿಂದ ಹೆಸರು ಮಾಡುತ್ತಿರುವ ಉಪ್ಪು ಹುಳಿ ಖಾರ ಚಿತ್ರಕ್ಕೆ ಇನ್ ಫೋಸಿಸ್ ಪ್ರತಿಷ್ಟಾನ ಅಧ್ಯಕೆಯಾಗಿರುವ ಸುಧಾಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಂದು ನಿರ್ದೇಶಕ ಇಮ್ರಾನ್‌ಸರ್ದಾರಿಯಾ ಬಿಡುಗಡೆಪೂರ್ವ ಪತ್ರಿಕಾಗೋಷ್ಟಿಯಲ್ಲಿ ವಿಷಯವನ್ನು ಬಹಿರಂಗಪಡಿಸಿದರು. ಮೇಡಂರನ್ನು ಮೊದಲಬಾರಿ ಭೇಟಿ ಮಾಡಿದಾಗ, ಅವರು ಹಿಂದಿ, ಇಂಗ್ಲೀಷ್ ಸಿನಿಮಾಗಳ ಬಗ್ಗ ಹೆಚ್ಚು ಮಾತನಾಡಿ, ಕತೆ ಕೇಳುವ ಮುನ್ನ ಚೆನ್ನಾಗಿಲ್ಲದಿದ್ದರೆ ಮುಲಾಜಿಲ್ಲದೆ ಹೇಳುತ್ತೇನೆಂದು ತಂಡಕ್ಕೆ ತಿಳಿಸಿದಾಗ ಒಂದು ಕ್ಷಣ ಭಯವಾಗಿತ್ತು.
ನಾವುಗಳು ಮಾಡು ಇಲ್ಲವೆ ಮಡಿ ಎಂಬ ಧೈರ್ಯದಿಂದ ಸಿನಿಮಾದ ತಿರುಳನ್ನು ಹೇಳಿದಾಗ, ಜನರು ಇಷ್ಟಪಡುವ ಕತೆಯಾಗಿದೆ. ಮುಂದುವರೆಸಿ ಅಂತ ನಿರ್ಮಾಪಕರಿಗೆ ತಿಳಿಸಿದ್ದು, ಶಕ್ತಿ ಬಂದಿದೆ. ಉಪ್ಪು ಹುಳೀ ಖಾರ ದೇಹಕ್ಕೆ ಅವಶ್ಯಕವಾಗಿರುತ್ತದೆ. ಇದರಲ್ಲಿ ಯಾವುದು ಹೆಚ್ಚು-ಕಡಿಮೆ ಆದರೂ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುತ್ತದೆ. ಎಲ್ಲಾ ಪಾತ್ರಗಳು ಟ್ರಾಜಡಿಯಾಗಿರುತ್ತದೆ. ನೋಡುಗನಿಗೆ ಕಾಮಿಡಿ ಅನಿಸುತ್ತದೆ. ದೇವಿ ಹೆಸರಿನಲ್ಲಿ ಮಾಲಾಶ್ರೀರವರು ರಗಡ್ ಪೋಲೀಸ್ ಅಧಿಕಾರಿಯಾಗಿ ಹುಬ್ಬಳ್ಳಿ ಭಾಷೆಯಲ್ಲಿ ಡೈಲಾಗ್ ಹೇಳಿರುವುದು ಹೈಲೈಟ್ ಎಂದರು.
ಧಾರವಾಹಿಯಲ್ಲಿ ನಟನೆ ನೋಡಿ ಅವಕಾಶ ನೀಡಿರುವ ನಿರ್ದೇಶಕರಿಗೆ ಋಣಿಯಾಗಿದ್ದೇನೆ. ಸ್ವಾಭಿಮಾನದ ಹುಡುಗ, ವೈದ್ಯನಾಗಿ ಸಮಾಜಸೇವೆ ಮಾಡಬೇಕಂಬ ಧ್ಯೇಯ ಇರುವ ಪಾತ್ರ ಅಂತ ಪರಿಚಯ ಮಾಡಿಕೊಂಡರು ಶಶಿ. ಬಿಂದಾಸ್ ಹುಡುಗಿ, ಎಲ್ಲವನ್ನು ಧೈರ್ಯದಿಂದ ಎದುರಿಸುವ ಪಾತ್ರೆ ಅಂತಾರೆ ಜಯಶ್ರೀರಾಮಯ್ಯ. ನಿಜಜೀವನದಲ್ಲಿ ಮಾಡುವ ನಿರೂಪಕಿಯಾಗಿ ಕಾಣಿಸಿಕೊಂಡಿದ್ದೇನೆ. ಎ.ಪಿ.ಅರ್ಜುನ್ ಸಂಭಾಷಣೆಗಳು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ನಿರ್ದೇಶಕರು ಹೊಸತನ, ಉಮ್ಮಸ್ಸು, ಶ್ರದ್ದೆಯಿಂದ ತಮ್ಮ ಪ್ರತಿಭೆಯನ್ನು ಧಾರೆ ಏರೆದಿದ್ದಾರೆ.
ನಮ್ಮೆಲ್ಲರಿಗೂ ಹೊಸ ಜೀವನ, ಭವಿಷ್ಯದಲ್ಲಿ ಅವಕಾಶಗಳು ಬಂದರೂ ಈ ಸಿನಿಮಾವನ್ನು ಎಂದಿಗೂ ಮರೆಯಲಾಗದು ಅಂತ ಅನುಶ್ರೀ ಮಾತನಾಡಿದರು. ಪೋಲೀಸ್ ವಿದ್ಯಾರ್ಥಿ, ಶಂಕರ್‌ನಾಗ್ ಅಭಿಮಾನಿಯಾಗಿ, ಅವರ ನಟನೆಯನ್ನು ನೋಡಿಕೊಂಡು ಒಂದು ಪರ್ಸೆಂಟ್ ಅವರಂತೆ ಅಭಿನಯಿಸಲು ಪ್ರಯತ್ನ ಮಾಡಿರುವುದಾಗಿ ಹೇಳಿಕೊಂಡಿದ್ದು ಶರತ್. ಹದಿಮೂರು ವರ್ಷಗಳಿಂದ ಇಮ್ರಾನ್ ಸರ್ ಸಹಾಯಕನಾಗಿ ಸೇವೆ ಸಲ್ಲಿಸಿದ್ದೇನೆ. ಸುದೀಪ್ ಹಾಡಿರುವ ಗೀತೆಗೆ ಡ್ಯಾನ್ಸ್ ಮಾಡಿದ್ದು ಮರೆಯಲಾಗದ ಅನುಭವ ಅಂತ ಸಂತಸಗೊಂಡಿದ್ದು ಧನಂಜಯ್.
ಅವಿದ್ಯಾವಂತ ಆದರೂ ಸುಧಾ ಮೂರ್ತಿ ಮೇಡಂ ಪ್ರಾರಂಭದಿಂದಲೂ ಧೈರ್ಯ ತುಂಬಿದರು ಎಂದು ನಿರ್ಮಾಪಕ ರಮೇಶ್‌ರೆಡ್ಡಿ ಹೇಳಿದರು. ಕಲ್ಮಶ ಇಲ್ಲದ ತಂಡ ಅಂತ ಬಣ್ಣನೆ ಮಾಡಿದ ವಿತರಕ ಜಾಕ್ ಮಂಜು ಲೀಲಾಜಾಲವಾಗಿ ಇಂದಿಗೆ 200 ಕೇಂದ್ರಗಳು ಖಚಿತವಾಗಿದೆ. ಇನ್ನೆರಡು ದಿನಗಳಗಲ್ಲಿ 20 ಸಂಖ್ಯೆ ಸೇರ್ಪಡೆಯಾಗಬಹುದು. ಚಿತ್ರಮಂದಿರದವರು ಸಿನಿಮಾದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎನ್ನುವಲ್ಲಿಗೆ ಗೋಷ್ಟಿಗೆ ಇತಿಶ್ರೀ ಹಾಡಲಾಯಿತು.