Advertisement

Uppinangady ವಲಯ ಅರಣ್ಯ ವ್ಯಾಪ್ತಿಯ ಶಿರಾಡಿ; ರಕ್ಷಿತಾರಣ್ಯದಲ್ಲಿ ಮರಗಳ ಮಾರಣ ಹೋಮ

12:35 PM Aug 29, 2023 | Team Udayavani |

ಉಪ್ಪಿನಂಗಡಿ: ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಉಪ್ಪಿನಂಗಡಿ ಅರಣ್ಯವಲಯ ವ್ಯಾಪ್ತಿಯಲ್ಲಿ ಬರುವ ಶಿರಾಡಿ, ಶಿಬಾಜೆ ಮೊದಲಾದ ಪ್ರದೇಶಗಳ ಅರಣ್ಯ ಸಂಪತ್ತು ಕಳ್ಳರ ಪಾಲಾಗುತ್ತಿದ್ದು, ಉತ್ತಮ ಜಾತಿಯ ಬೃಹತ್‌ ಮರಗಳ ಮಾರಣ ಹೋಮ ನಡೆಯುತ್ತಿದೆ.

Advertisement

ಶಿಬಾಜೆ ವಿಭಾಗದ ನೀರಾನದಿಂದ ಕುರುಂಬು, ಅರಂಪಾದೆ ಭೂತಮಜಲಿನಿಂದ ಮೇಲಿನ ಕುರುಂಜ ತನಕ, ಪೆರ್ಲದ ಕಲ್ಲಾಜೆಯಿಂದ ಕೊಳಕೆ ಬೈಲು ತನಕ ನಿರಂತರವಾಗಿ ಬಣು³, ಬೇಂಗ, ಹೆಬ್ಬಲಸು ಮೊದಲಾದ ಬೃಹತ್‌ ಮರಗಳನ್ನು ರಾತ್ರಿ ಬೆಳಗಾಗುವುದರ ಒಳಗೆ ಕಡಿದುರುಳಿಸಿ ದಿಮ್ಮಿಗಳನ್ನಾಗಿಸಿ ಸಾಗಿಸುತ್ತಿರುವ ಬಗ್ಗೆ ಸ್ಥಳೀಯರು ದೂರುತ್ತಿದ್ದಾರೆ.

ರಾತ್ರಿ ವೇಳೆ ಟೆಂಪೋ ಮತ್ತು ಮರ ಕೊಯ್ಯುವ ಯಂತ್ರದೊಂದಿಗೆ ಬರುವ ಮರಗಳ್ಳರು ಮರವನ್ನು ಬುಡದಿಂದಲೇ ಉರುಳಿಸಿ ಅಲ್ಲಿಯೇ ತುಂಡುಗಳನ್ನಾಗಿಸಿ ಟೆಂಪೋದಲ್ಲಿ ಸಾಗಿಸುತ್ತಾರೆ. ರಾತ್ರಿ ಬೆಳಗಾಗುವುದರ ಒಳಗಾಗಿ ಕಾಡಿನೊಳಗಿದ್ದ ಮರ ಮಾಯವಾಗಿರುತ್ತದೆ. ರೆಂಬೆ ಕೊಂಬೆಗಳನ್ನು ಅಲ್ಲೇ ಬಿಟ್ಟು ಹೋಗಿ 4 ದಿನಗಳ ಬಳಿಕ ಕಟ್ಟಿಗೆಯಾಗಿ ಮಾಡಿ ಸಾಗಿಸಲಾಗುತ್ತದೆ. ಬಳಿಕ ಬುಡಕ್ಕೆ ಪೆಟ್ರೋಲ್‌ ಸುರಿದು ಸುಟ್ಟು ಹಾಕಿ ಕುರುಹು ನಾಶ ಮಾಡಲಾಗುತ್ತದೆ.

ನೀರಾನದಿಂದ ಕುರುಂಬು, ಅರಂಪಾದೆ ಭೂತಮಜಲಿನಿಂದ ಮೇಲಿನ ಕುರುಂಜ ತನಕ, ಪೆರ್ಲದ ಕಲ್ಲಾಜೆಯಿಂದ ಕೊಳಕೆ ಬೈಲು ತನಕ 5 ಕಿ.ಮೀ. ವ್ಯಾಪ್ತಿಯ ಅರಣ್ಯದ ಒಳಗಡೆ ಮರಗಳ ಲೂಟಿ ಆಗಿದ್ದು, ಈ ಪ್ರದೇಶ ಬಯಲಿನಂತಾಗಿದೆ. ಸದ್ಯ ರಸ್ತೆ ಬದಿಯ ಅರಣ್ಯದಲ್ಲಿ ಮಾತ್ರ ಕೆಲವು ಮರಗಳು ಕಾಣಿಸುತ್ತವೆ.

ಅರಣ್ಯ ಅಧಿಕಾರಿಯ ಮನೆಯೆದುರಿನ 2 ಮರಗಳೇ ಮಾಯ!

Advertisement

ನೀರಾನ ಮತ್ತು ಕುರುಂಬು ಮಧ್ಯೆ ಮುಖ್ಯ ರಸ್ತೆಗೆ ಕಾಣುವಂತೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಯೋರ್ವರ ಮನೆಯಿಂದ ಕೂಗಳತೆ ದೂರದಲ್ಲಿದ್ದ ಬೃಹತ್‌ ಗಾತ್ರದ 2 ಬೇಂಗದ ಮರಗಳನ್ನು ವಾರದ ಹಿಂದೆ ಕಡಿದು ಸಾಗಿಸಲಾಗಿದೆ.

ಅರಣ್ಯ ಸಿಬಂದಿಯ ಮನೆಯ ಬಳಿಯಿಂದಲೇ ಮರಗಳನ್ನು ಕಡಿದು ಸಾಗಿಸಿದ್ದಾರೆ. ವನಪಾಲಕರು, ಅರಣ್ಯ ಅಧಿಕಾರಿಗಳು ಮರಗಳ್ಳರ ಜತೆ ಕೈಜೋಡಿಸಿದ್ದಾರೋ ಎಂಬ ಸಂಶಯ ಬರುವಂತೆ ಮಾಡಿದ ಈ ಪ್ರಕರಣ. ಇನ್ನಾದರೂ ಹಿರಿಯ ಅಧಿಕಾರಿಗಳು ಕೂಡಲೇ ಸಮಗ್ರ ತನಿಖೆ ನಡೆಸಿ ಕಾಡಿನ ಲೂಟಿಯನ್ನು ತಡೆಯಬೇಕಾಗಿದೆ. ವನಮಹೋತ್ಸವ ಆಚರಣೆಯ ಜತೆಗೆ ಇರುವ ಅರಣ್ಯ ಸಂಪತ್ತಿನ ಸಂರಕ್ಷಣೆಯು ಈಗಿನ ತುರ್ತು ಅಗತ್ಯವಾಗಿದೆ. – ಕುರಿಯಕೋಸ್‌, ಗ್ರಾಮಸ್ಥ

Advertisement

Udayavani is now on Telegram. Click here to join our channel and stay updated with the latest news.

Next