ಉಪ್ಪಿನಂಗಡಿ: ಇಲ್ಲಿನ ಸುಬ್ರಹ್ಮಣ್ಯ ತಿರುವು ರಸ್ತೆಯ ಹಳೆಗೇಟು ಸಮೀಪ ರಸ್ತೆ ವಿಸ್ತರಣೆ ಕಾಮಗಾರಿಯಿಂದಾಗಿ, ರಸ್ತೆ ಬದಿಯ ಅಪೂರ್ಣಗೊಂಡ ಚರಂಡಿ ಕಾಮಗಾರಿಯ ದೆಸೆಯಿಂದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ಮುಗ್ಗರಿಸಿ 2 ಮನೆಗಳ ಕಾಂಪೌಂಡ್ ಮತ್ತು ಗೇಟಿಗೆ ಅಡ್ಡಲಾಗಿ ವಾಲಿ ನಿಂತ ಕಾರಣ 2 ಮನೆಯವರು 2 ತಾಸು ಕಾಲ ದಿಗ್ಬಂಧನಕ್ಕೆ ತುತ್ತಾದ ಘಟನೆ ಸಂಭವಿಸಿದೆ.
ಇಲ್ಲಿನ ಸುಬ್ರಹ್ಮಣ್ಯ ತಿರುವು ರಸ್ತೆಯಲ್ಲಿ ಹಳೆಗೇಟು ಎಂಬಲ್ಲಿ ಬುಧವಾರ ಬೆಳಗ್ಗೆ ಸುಬ್ರಹ್ಮಣ್ಯ ಕಡೆಯಿಂದ ಮಂಗಳೂರಿಗೆ ಹೋಗುತ್ತಿದ್ದ ಬಸ್ ರಸ್ತೆ ಬದಿಯ ಚರಂಡಿಗೆ ಮುಗ್ಗರಿಸಿ ವಾಲಿಕೊಂಡು ನಿಂತಿದ್ದು, ಈ ಅವಘಡದಿಂದಾಗಿ ಹಮೀದ್ ಮತ್ತು ರಫೀಕ್ ಎಂಬವರ ಮನೆಯ ಗೇಟು ಹಾನಿಗೊಂಡಿದೆ. ಬಸ್ ಮನೆ ಮುಂಭಾಗದ ಗೇಟ್ ಮೇಲೆ ವಾಲಿಕೊಂಡು ನಿಂತಿದ್ದರಿಂದಾಗಿ ಮನೆಯ ಗೇಟು ತೆಗೆಯಲಾಗದೆ ಮನೆಯವರು 2 ತಾಸು ಹೊರ ಬರಲಾಗದೆ ದಿಗ್ಬಂಧನಕ್ಕೆ ಒಳಗಾಗಿದ್ದರು.
ರಸ್ತೆ ಬದಿಯ ಚರಂಡಿಗೆ ತಾಗಿಕೊಂಡು ವಿದ್ಯುತ್ ಕಂಬ ಮತ್ತು ತೆಂಗಿನ ಮರ ಇದ್ದು, ಬಸ್ ಇದಕ್ಕೆ ಢಿಕ್ಕಿ ಹೊಡೆಯುವುದು ತಪ್ಪಿದ್ದು ಅದೃಷ್ಟವಶಾತ್ ಭಾರೀ ದುರಂತವೊಂದು ತಪ್ಪಿದಂತಾಗಿದೆ. ಉಪ್ಪಿನಂಗಡಿ ಬಸ್ ನಿಲ್ದಾಣದ ನಿಯಂತ್ರಣಾ ಕಾರಿ ರಾಮಚಂದ್ರ ಅಡಪ ಸ್ಥಳಕ್ಕೆ ಭೇಟಿ ನೀಡಿ ಬಸ್ ತೆರಗೆ ಕ್ರಮಕೈಗೊಂಡರು.
ಸ್ಥಳಕ್ಕೆ ಭೇಟಿ ನೀಡಿದ್ದ ಪಿಡಬ್ಲ್ಯುಡಿ ಎಂಜಿನಿಯರ್‌ರನ್ನು ತರಾಟೆಗೆ ತೆಗೆದು ಕೊಂಡ ಸ್ಥಳೀಯರು 1 ವರ್ಷದಿಂದ ಇಲ್ಲಿ ಈ ರೀತಿ ಸಮಸ್ಯೆ ಇದೆ, ಹಲವು ಬಾರಿ ದೂರು ನೀಡಿದ್ದೇವೆ, ಅತ್ತ ಚರಂಡಿಯೂ ಇಲ್ಲ, ಇತ್ತ ಮಳೆ ನೀರು ಹರಿದಾಡದೆ ಅಲ್ಲೇ ನಿಂತು ಕೊಳ್ಳುತ್ತಿದೆ, ಮನೆಯ ಒಳಗೆ ಒರತೆ ಬರಲಾರಂಭಿಸಿದೆ, ಅಪಾಯ ಇದೆ, ಕಾಮಗಾರಿ ವಹಿಸಿರುವ ಗುತ್ತಿಗೆದಾರರನ್ನು ಇಲ್ಲಿಗೆ ಕರೆಸಿ, ತತ್‌ಕ್ಷಣ ಚರಂಡಿ ನಿರ್ಮಿಸಿಕೊಡುವಂತೆ ತರಾಟೆಗೆ ತೆಗೆದುಕೊಂಡರು. ಚರಂಡಿ ನಿರ್ಮಾಣ ಕಾರ್ಯವನ್ನು ತತ್‌ಕ್ಷಣಕ್ಕೆ ಮಾಡಿಕೊಡುವಂತೆಯೂ ಸೂಚನೆ ನೀಡಲಾಗಿದೆ ಎಂದು ಪಿಡಬ್ಲ್ಯುಡಿ ಎಂಜಿನಿಯರ್ ಪ್ರಮೋದ್ ತಿಳಿಸಿದ್ದಾರೆ.