ಉಪ್ಪಿನಂಗಡಿ: ಸಂಸ್ಕೃತಿ ವ್ಯಕ್ತಿಯ ವ್ಯಕ್ತಿತ್ವದ ಉದ್ಧಾರಕ್ಕೆ ಕಾರಣವಾದರೆ, ಸಾಹಿತ್ಯ ವ್ಯಕ್ತಿತ್ವದ ಸೌಂದರ್ಯಕ್ಕೆ ಕಾರಣವಾಗುತ್ತದೆ. ಸಾಹಿತ್ಯದ ಮೂಲಕ ಸತ್ಯಶಾಂತ ಪ್ರತಿಷ್ಠಾನ ಉತ್ತಮ ಸಮಾಜದ ನಿರ್ಮಾಣಕ್ಕೆ ಪೂರಕವಾಗಿರಲಿ ಎಂದು ಸುಬ್ರಹ್ಮಣ್ಯ ಮಠಾಧೀಶ ವಿದ್ಯಾಪ್ರಸನ್ನತೀರ್ಥ ಶ್ರೀಗಳು ತಿಳಿಸಿದರು.
ಅವರು ಗುರುವಾರ 34ನೇ ನೆಕ್ಕಿಲಾಡಿಯ ಶಾಂತಾ ಸಭಾಭವನದಲ್ಲಿ ನಡೆದ ಉಪ್ಪಿನಂಗಡಿ ಸತ್ಯಶಾಂತ ಪ್ರತಿಷ್ಠಾನ, ಕವಿಗೋಷ್ಠಿ ಇದರ ಉದ್ಘಾಟನೆಯನ್ನು ನೆರವೇರಿಸಿ ಆಶೀರ್ವಚನ ನೀಡಿದರು.
ಸತ್ಯಶಾಂತ ವಚನ ಸಂಕಲನವನ್ನು ಬಿಡುಗಡೆಗೊಳಿಸಿದ ಪುತ್ತೂರು ತಾ| ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ಐತಪ್ಪ ನಾಯ್ಕ ಮಾತನಾಡಿದರು. ಮುಖ್ಯ ಅತಿಥಿಯಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಅಲಿಮಾರ ರಘುನಾಥ ರೈ, ಶ್ರೀರಾಮ ಶಾಲಾ ಅಧ್ಯಕ್ಷ ಕರುಣಾಕರ ಸುವರ್ಣ, ಪುದುಕೋಳಿ ಕೃಷ್ಣಮೂರ್ತಿ, ಶ್ಯಾಮ್ ಸುದರ್ಶನ್ ಹೊಸಮೂಲೆ, ಶ್ಯಾಮ್ ಪ್ರಕಾಶ್ ತಲೆಂಗಳ, ರವಿ ಕುಂಟಿನಿ ಭಾಗವಹಿಸಿದರು.
ಉದ್ಘಾಟನ ಕಾರ್ಯಕ್ರಮದ ಬಳಿಕ ಸಾಹಿತಿ ವಿ.ಬಿ. ಕುಳಮರ್ವ ಹಾಗೂ ಭಾಸ್ಕರ್ ರೈ ಕುಕ್ಕುವಳ್ಳಿ ಅವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಿತು. ರಾಜ್ಯಾದ್ಯಂತ ಆಗಮಿಸಿದ ನೂರಾರು ಕವಿಗಳು ಭಾಗವಹಿಸಿದರು. ಯಕ್ಷಗಾನ ಕಲಾವಿದ ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು. ಸೌರಭಾ ಕುಂಟಿನಿ ಪ್ರಾರ್ಥಿಸಿ,
ಸತ್ಯಾತ್ಮ ಕುಂಟಿನಿ ವಂದಿಸಿದರು.
ಸಾಹಿತ್ಯ ಅಭಿರುಚಿ ಇರಲಿ
ಸಭಾಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಇಂದಿನ ಯುವ ಜನತೆಗೆ ಜೀವನ ಮೌಲ್ಯವನ್ನು ವೃದ್ಧಿಸಿ, ಜೀವನೋಲ್ಲಾಸವನ್ನು ಹೆಚ್ಚಿಸುವ ಕಾರ್ಯ ಕಾವ್ಯ ಸಾಹಿತ್ಯದಿಂದ ನಡೆಯಬೇಕಾಗಿದೆ ಎಂದು ಆಶಿಸಿದರು.