Advertisement
ಸಂಜೆಯ ಅನಂತರ ನೇತ್ರಾವತಿ -ಕುಮಾರಧಾರ ನದಿಗಳ ಉಭಯ ಸಂಗಮವಾಯಿತು.
ಕುಮಾರಧಾರಾ ಹಾಗೂ ನೇತ್ರಾವತಿ ನದಿಗಳು ನದಿಯ ಒಳಹರಿನ ಮೂಲಕ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ಸಂಗಮ ವಾಗುವುದು ಮಾಮೂಲಿಯಾದರೆ, ಮಳೆಗಾಲದಲ್ಲಿ ದೇವಾಲಯದ ಎಡಭಾಗದಿಂದ ನೇತ್ರಾವತಿ ನದಿ, ಬಲಭಾಗದಿಂದ ಕುಮಾರಧಾರಾ ನದಿ ಉಕ್ಕೇರಿ ಬಂದು ಸಹಸ್ರಲಿಂಗೇಶ್ವರ ದೇವಾಲಯದ ಪ್ರವೇಶ ದ್ವಾರದವರೆಗೆ ಬಂದರೆ ಸಂಗಮವಾಯಿತೆಂದು ಲೆಕ್ಕ. ಆದರೆ ಶುಕ್ರವಾರ ಮಧ್ಯಾಹ್ನದವರೆಗೆ ನೇತ್ರಾವತಿ ನದಿ ನೀರು ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗವನ್ನು ದಾಟಿ ಮುಂದಕ್ಕೆ ಸಾಗಿತ್ತು. ಆದರೂ ಅದು ಕುಮಾರಧಾರಾ ನದಿಯನ್ನು ಸೇರದೆ ಅಲ್ಲಿಯೇ ತಿರುವು ಪಡೆದುಕೊಂಡು ರಸ್ತೆಯ ಮೂಲಕ ಹೋಗಿ ನಾಜೂಕು ಸೆಲೂನ್ ತನಕ ತಲುಪಿತ್ತು. ಇನ್ನೊಂದೆಡೆ ಕುಮಾರಧಾರಾ ನದಿಯ ನೀರು ಮತ್ತೂಂದು ದಿಕ್ಕಿನಿಂದ ದೇವಾಲಯದ ಆವರಣವನ್ನು ಪ್ರವೇಶಿಸಲೇ ಇಲ್ಲ. ಸಂಗಮವಾಗುವ ಕ್ಷಣವನ್ನು ಎದುರು ನೋಡುತ್ತಿದ್ದ ನೂರಾರು ಜನರು ನಿರಾಶರಾದರು. ಸಂಜೆಯಾದೊಡನೆ ಸಂಗಮವಾಯಿತು. ನೆರೆ ಭೀತಿಯ ಹಿನ್ನೆಲೆಯಲ್ಲಿ ಶುಕ್ರವಾರ ಗೃಹರಕ್ಷಕ ದಳದ ಪ್ರವಾಹ ರಕ್ಷಣಾ ತಂಡದೊಂದಿಗೆ ಅಗ್ನಿಶಾಮಕ ದಳದವರು, ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.
Related Articles
ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ರಭಸವಾಗಿದ್ದು ಈ ಬಾರಿ ಸಂಗಮವಾಗದಿರಲು ಒಂದು ಕಾರಣ ವಾದರೆ, ದೇವಾಲಯದ ಬಳಿ ನಡೆದ ಹಲವು ಅಭಿವೃದ್ಧಿ ಕಾಮಗಾರಿಗಳು ಇನ್ನೊಂದು ಪ್ರಮುಖ ಕಾರಣವಾಗಿವೆ. ಕುಮಾರಧಾರಾ ನದಿ ನೀರು ದೇವಸ್ಥಾನ ಪ್ರವೇಶಿಸುವ ಕಡೆಯ ಪ್ರದೇಶ ಈಗ ಮೊದಲಿನಂತಿರದೆ, ಹಲವು ಅಭಿವೃದ್ಧಿ ಕಾಮಗಾರಿ, ಕಟ್ಟಡ ನಿರ್ಮಾಣ ಮತ್ತು ತಡೆಗೋಡೆ ನಿರ್ಮಾಣವಾಗಿರುವುದರಿಂದಾಗಿ ನೀರು ಸರಾಗವಾಗಿ ಮುನ್ನುಗ್ಗಿ ಬರಲು ಸಾಧ್ಯವಾಗುತ್ತಿಲ್ಲ. ಆದ್ದರಿಂದಾಗಿ ಬಲ ಬದಿಯಿಂದ ಕುಮಾರಧಾರಾ ನದಿ ನೀರು ದೇವಾಲಯದ ಆವರಣದೊಳಗೆ ಬಂದಿಲ್ಲ. ಕುಮಾರಧಾರಾ ನದಿ ಬದಿಯ ಪ್ರದೇಶ ದೇವಾಲಯದ ಆವರಣದಿಂದ ಈಗ ಎತ್ತರಿಸಲ್ಪಟ್ಟಿರುವುದರಿಂದ ದೇವಾಲಯದ ಆವರಣದಲ್ಲಿದ್ದ ನೇತ್ರಾವತಿ ನದಿ ನೀರು ಕೂಡಾ ದೇವಾಲಯದ ಬಲ ಬದಿಗೆ ಹೋಗಿ ಕುಮಾರಧಾರಾ ನದಿಯನ್ನು ಸೇರಿಕೊಳ್ಳಲಾಗದೇ, ತಿರುವು ಪಡೆದು ರಸ್ತೆಯತ್ತ ಸಾಗುವಂತಾಯಿತು. ಆದರೂ ಉಭಯ ನದಿಗಳ ಸಂಗಮವಾಯಿತು.
Advertisement