Advertisement

Uppinangady-ನೆಲ್ಯಾಡಿ ಹೆದ್ದಾರಿ ಹೊಂಡಮಯ, ಧೂಳುಮಯ!

09:55 AM Oct 25, 2024 | Team Udayavani |

ಪುತ್ತೂರು: ಬಿ.ಸಿ.ರೋಡ್‌- ಅಡ್ಡಹೊಳೆಯ ಚತುಷ್ಪಥ ಕಾಮಗಾರಿಯ ಉಪ್ಪಿನಂಗಡಿ ಬಳಿಯ ಸುಬ್ರಹ್ಮಣ್ಯ ಕ್ರಾಸ್‌ನಿಂದ ನೆಲ್ಯಾಡಿ ಗಡಿ ತನಕದ ರಸ್ತೆ ಸಂಪೂರ್ಣ ಧೂಳುಮಯ, ಹೊಂಡಮಯ. ಅರ್ಧಂಬರ್ಧ ಕಾಮಗಾರಿ ಪರಿಣಾಮ ಇಲ್ಲಿ ಸಂಚಾರ ಅಂದರೆ ದೇವರಿಗೆ ಪ್ರೀತಿ!

Advertisement

ಮಂಗಳೂರು, ಪುತ್ತೂರು ಭಾಗದಿಂದ ಪ್ರಸಿದ್ಧ ಯಾತ್ರಾಸ್ಥಳ ಸುಬ್ರಹ್ಮಣ್ಯವನ್ನು ಕಡಬದ ಮೂಲಕ ದಾಟಲು ಉಪ್ಪಿನಂಗಡಿ ಬಳಿಯಿಂದ ಕವಲೊಡೆದಿರುವ ರಾಜ್ಯ ಹೆದ್ದಾರಿ ಕ್ರಾಸ್‌ ಬಳಿ ನಿರ್ಮಾಣ ಹಂತದಲ್ಲಿರುವ ಅಂಡರ್‌ಪಾಸ್‌ ದಾಟುವುದೇ ಒಂದು ಸವಾಲು. ಇಲ್ಲಿ ಒಂದು ಬದಿ ಸರ್ವಿಸ್‌ ರಸ್ತೆ ಇದ್ದು ಅದು ಜಲ್ಲಿ, ಧೂಳಿನಿಂದ ತುಂಬಿದೆ. ಇನ್ನೊಂದು ಬದಿಯ ಸರ್ವಿಸ್‌ ರಸ್ತೆ ಅರ್ಧದಲ್ಲೇ ಬಾಕಿ ಇದೆ. ಹೀಗಾಗಿ ಸುಬ್ರಹ್ಮಣ್ಯ-ಕಡಬದಿಂದ, ನೆಲ್ಯಾಡಿಯಿಂದ, ಪುತ್ತೂರು ಮಂಗಳೂರು ಕಡೆಯಿಂದ ಬರುವ ವಾಹನಗಳ ರಸ್ತೆ ದಾಟಲು ಇಲ್ಲಿ ಅಕ್ಷರಶಃ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸುಬ್ರಹ್ಮಣ್ಯ ಕ್ರಾಸ್‌ ನಿಂದ ವಳಾಲು ತನಕ ಧೂಳು ದೇಹಕ್ಕೆ ಸೇರದೆ ಸಂಚಾರವೇ ಅಸಾಧ್ಯ. ಎದುರುಭಾಗದಿಂದ ಘನವಾಹನ ಬಂತೆಂದರೆ ದ್ವಿಚಕ್ರ , ಕಾರು ಮೊದಲಾದ ಲಘು ವಾಹನಗಳಿಗೆ ದಾರಿಯೇ ಕಾಣದಷ್ಟು ಧೂಳು ಆವರಿಸುತ್ತಿದೆ. ಮುಖ್ಯವಾಗಿ ಇಲ್ಲಿ ಮಳೆಗಾಲದ ಕೆಸರಿನ ಸಮಸ್ಯೆ ನೀಗಲು ಜಲ್ಲಿ ಹುಡಿ ಹಾಕಿದ್ದು ಅದಕ್ಕೆ ಡಾಮರು ಹಾಕಿಲ್ಲ. ಇದರಿಂದ ಈಗ ಧೂಳು ಏಳುತ್ತಿದೆ. ನೀರು ಹಾಯಿಸಿದರೂ ಕ್ಷಣ ಮಾತ್ರಕ್ಕಷ್ಟೇ ಪರಿಹಾರ. ಅನಂತರ ಮತ್ತಷ್ಟು ಧೂಳು ಏಳುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ರಸ್ತೆಯಲ್ಲಿ ಸಂಚಾರ ಸಾಧ್ಯವಿಲ್ಲ ಅನ್ನುತ್ತಾರೆ ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಬೈಕ್‌ ಸವಾರ ಅನೂಪ್‌.

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗಿಂತ ಮೊದಲು ಹಲವೆಡೆ ಪ್ರಯಾಣಿಕರ ತಂಗುದಾಣ ಇತ್ತು. ಕಾಮಗಾರಿಯ ಕಾರಣಕ್ಕಾಗಿ ಅದನ್ನು ತೆರವು ಮಾಡಲಾಗಿದ್ದು ಬಸ್‌ ಎಲ್ಲಿ ನಿಲ್ಲುತ್ತದೆ ಎನ್ನುವುದೇ ಗೊತ್ತಾಗುವುದಿಲ್ಲ!

Advertisement

ಕೂಟೇಲು ಸೇತುವೆ : ಮತ್ತಷ್ಟು ಅಪಾಯ!
ಹೇಳಿ ಕೇಳಿ ಕೂಟೇಲು ಸೇತುವೆ ಅಪಘಾತದ ಸ್ಥಳ. ಇಲ್ಲಿ ಹಲವಾರು ವಾಹನ ಅಪಘಾತ ಸಂಭವಿಸಿ ಜೀವ ಹಾನಿ ಆದ ಉದಾಹರಣೆ ಇವೆ. ಇಲ್ಲಿ ಹೊಸ ಸೇತುವ ನಿರ್ಮಾಣ ಹಂತದಲ್ಲಿದ್ದು ಅದಿನ್ನು ಪೂರ್ಣ ಆಗಿಲ್ಲ. ಈಗಿರುವ ಸೇತುವೆ ಮೇಲ್ಭಾಗದಲ್ಲಿ ಹೊಂಡ ಗುಂಡಿಗಳು ತುಂಬಿದ್ದು ಸಂಚಾರವೇ ಕಷ್ಟ ಅನ್ನುವ ಸ್ಥಿತಿಯಲ್ಲಿದೆ. ಇನ್ನೂ ಹೊಸ ಸೇತುವೆಗೆಂದು ನಿರ್ಮಾಣ ಹಂತದಲ್ಲಿರುವ ನೇರ ಸಂಪರ್ಕ ರಸ್ತಯು ಅರ್ಧ ದಾರಿಯಲ್ಲಿ ಇದೆ. ರಸ್ತೆ, ಸೇತುವೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳ್ಳದಿದ್ದರೆ ಈ ಸ್ಥಳ ಮತ್ತಷ್ಟು ಅಪಾಯದ ಸ್ಥಳವಾಗುವ ಸಾಧ್ಯತೆ ಇದೆ ಅನ್ನುತ್ತಿದೆ ಇಲ್ಲಿನ ಸ್ಥಿತಿ.

ನ‌ದಿಯಲ್ಲೇ ಕಾಮಗಾರಿ: ಪಂಜಳದ ಬಳಿ ನದಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಅಚ್ಚರಿಯೆಂದರೂ ಸತ್ಯ. ಅಂದರೆ ನೇತ್ರಾವತಿ ನದಿಯ ಒಂದು ಭಾಗದಲ್ಲಿ ಬೃಹತ್‌ ತಡೆಗೋಡೆ ನಿರ್ಮಾಣ ಹಂತದಲ್ಲೇ ಬಾಕಿ ಇದೆ. ಇನ್ನೊಂದು ಭಾಗದಲ್ಲಿ ಗುಡ್ಡ ಅಗೆದು ರಸ್ತೆ ನಿರ್ಮಾಣ ಅರ್ಧದಲ್ಲಿ ಇದೆ. ಇವೆರಡರ ನಡುವಿನ ಕಿರಿದಾದ ಹಳೆಯ ರಸ್ತೆಯಲ್ಲಿ ಜಲ್ಲಿ, ಡಾಮರು ಮಾಯವಾಗಿದೆ. ಇಲ್ಲಿ ಕ್ಷಣ ಕ್ಷಣಕ್ಕೂ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದ್ದು ಕಾಮಗಾರಿಯ ವೇಗ ನೋಡಿದರೆ ಸದ್ಯಕ್ಕೆ ಇದಕ್ಕೆ ಪರಿಹಾರ ಸಿಗುವುದು ಅನುಮಾನ.

ಹಳೆಗೇಟು ಬಳಿ ನದಿಯಲ್ಲೇ ಕಾಮಗಾರಿ ನಡೆದಿದ್ದು, ಉದ್ದಕ್ಕೆ ತಡೆಗೋಡೆ ಕಟ್ಟಿ ಅದಕ್ಕೆ ಮಣ್ಣು ತುಂಬಲಾಗಿದೆ. ಇದರಿಂದ ನೇತ್ರಾವತಿಯ ಅಗಲ ಕಡಿಮೆಯಾಗಿದೆ ಅನ್ನುವ ಆರೋಪ ಕೇಳಿ ಬಂದಿದೆ.

ಅರ್ಧಭಾಗ ಪರವಾಗಿಲ್ಲ..!
ಗೋಳಿತೊಟ್ಟು ವಿನಿಂದ ನೆಲ್ಯಾಡಿ ಗಡಿ ತನಕ ರಸ್ತೆ ಸಂಚಾರದ ದೃಷ್ಟಿಯಿಂದ ಪರವಾಗಿಲ್ಲ. ಅಲ್ಲಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದರೂ ಚತುಷ್ಪಥ ರಸ್ತೆ ನಿರ್ಮಾಣವಾಗಿದ್ದು ಸಂಚಾರಕ್ಕೆ ದೊಡ್ಡ ಸಮಸ್ಯೆ ಇಲ್ಲ. ಆದರೆ ಸುಬ್ರಹ್ಮಣ್ಯ ಕ್ರಾಸ್‌ನಿಂದ ಗೋಳಿತೊಟ್ಟು ತನಕದ ಬಹುಭಾಗ ಇದಕ್ಕೆ ತದ್ವಿರುದ್ಧ ಸ್ಥಿತಿಯಲ್ಲಿ ಇದೆ. ಇಲ್ಲಿ ಚತುಷ್ಪಥವೂ ಅಪೂರ್ಣ, ಹಳೆ ರಸ್ತೆಯೂ ಅಸಮರ್ಪಕತೆಯಿಂದ ಕೂಡಿದೆ. ಬೆದ್ರೋಡಿ, ವಳಾಲು ಆಸುಪಾಸಿನಲ್ಲಿ ಕಾಮಗಾರಿ ಕುಂಟುತ್ತಾ ಸಾಗಿದೆ.

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next