Advertisement

ಗಡಿತರ್ಕ: ಅಭಿವೃದ್ಧಿ ವಂಚಿತ ರಸ್ತೆ; ಎಲ್ಲೆಡೆ ಹೊಂಡಗುಂಡಿ!

11:38 AM Jul 28, 2018 | |

ಉಪ್ಪಿನಂಗಡಿ: ಎರಡು ತಾಲೂಕುಗಳ ಗಡಿ ತರ್ಕದಿಂದ ಉಪ್ಪಿನಂಗಡಿ ಗೋಳಿತೊಟ್ಟು ಶಾಂತಿ ನಗರದಲ್ಲಿರುವ ರಸ್ತೆಗೆ ಡಾಮರು ಕಾಮಗಾರಿಯಾಗದೆ ಅಭಿವೃದ್ಧಿಯಿಂದ ವಂಚಿತವಾಗಿದೆ. ರಸ್ತೆಯಲ್ಲೆಲ್ಲ ಬೃಹತ್‌ ಗುಂಡಿ ಸೃಷ್ಟಿಯಾಗಿದೆ.

Advertisement

ಪುತ್ತೂರು ಹಾಗೂ ಸುಳ್ಯ ತಾಲೂಕುಗಳ ಗಡಿ ಪ್ರದೇಶದಲ್ಲಿ ಗೋಳಿತೊಟ್ಟು ಶಾಂತಿನಗರದ ರಸ್ತೆ ಬರುತ್ತದೆ. ಸುಳ್ಯ ತಾಲೂಕು ವ್ಯಾಪ್ತಿಗೆ ನೆಲ್ಯಾಡಿ ಜಿ.ಪಂ. ಕ್ಷೇತ್ರವಾದರೆ, ಕಾಂಚನ ವ್ಯಾಪ್ತಿಯು ಪುತ್ತೂರು ತಾಲೂಕಿನ ಜಿ.ಪಂ.ಗೆ ಸೇರಿದ್ದಾಗಿದೆ. ವಿಧಾನ ಸಭಾ ಕ್ಷೇತ್ರ ಸುಳ್ಯ ಸುಮಾರು 3 ಕಿ.ಮೀ. ಉದ್ದಕ್ಕೆ ರಸ್ತೆ ಅಯೋಮಯವಾಗಿದೆ. ದಿನನಿತ್ಯ 6 ಟ್ರಿಪ್‌ ಸರಕಾರಿ ಬಸ್‌ಗಳು ಬರುತ್ತಿದ್ದವು. ಬಸ್‌ ಚಾಲಕರು ಈ ರಸ್ತೆಯಲ್ಲಿ ಬಸ್‌ ಓಡಿಸಲು ಅಸಾಧ್ಯವೆಂದು ಟ್ರಿಪ್‌ ಸ್ಥಗಿತ ಮಾಡಲು ನಿರ್ಧರಿಸಿದ್ದರು. ಇಲ್ಲಿನ ವ್ಯಾಪ್ತಿಯಲ್ಲಿನ ಶಾಂತಿನಗರ, ಮೇಲೂರು, ಗೋಳಿತೊಟ್ಟು, ಉಪ್ಪಿನಂಗಡಿಗೆ ಸುಮಾರು 150ಕ್ಕೂ ಅಧಿಕ ವಿದ್ಯಾರ್ಥಿಗಳು ಹೈಸ್ಕೂಲ್‌ ಹಾಗೂ ಪದವಿ ಕಾಲೇಜಿಗಳಿಗೆ ಶಿಕ್ಷಣ ಅರಸಿ ಹೋಗುತ್ತಿದ್ದಾರೆ. ಇಲ್ಲಿಗೆ ಸರಕಾರಿ ಬಸ್‌ಗಳು ಅತೀ ಅವಶ್ಯವಾಗಿದೆ. ಅದೂ ಸ್ಥಗಿತವಾದರೆ ಕಷ್ಟ ವೆಂದು ಮನಗಂಡ ಗ್ರಾಮಸ್ಥರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ರಸ್ತೆಯಲ್ಲಿರುವ ಹೊಂಡಗಳಿಗೆ ಕಲ್ಲು ಹಾಕಿ ಸಮತಟ್ಟುಗೊಳಿಸಿದ್ದರು. ಅದು ಕೂಡ ಕಿತ್ತು ಹೋಗಿದ್ದು, ಮತ್ತದೇ ಸಮಸ್ಯೆ ಸೃಷ್ಟಿಯಾಗಿದೆ.

ಮಂಜೂರಾತಿಗೆ ಪ್ರಯತ್ನ
ರಸ್ತೆ ಸಂಪೂರ್ಣ ಕೆಟ್ಟು ಹೋಗಿರುವುದು ಗಮನಕ್ಕೆ ಬಂದಿದೆ. ತುರ್ತು ಅಗತ್ಯ ಬಿದ್ದರೆ ಮುಂಗಡ ಕಾಮಗಾರಿ ಗುತ್ತಿಗೆದಾರರಿಗೆ ವಹಿಸಿಕೊಟ್ಟು, ಶಾಸಕರಿಗೆ ಮನವರಿಕೆ ಮಾಡಿ ಅನುದಾನ ಮಂಜೂರಾತಿಗೆ ಪ್ರಯತ್ನಿಸಲಾಗುವುದು.
– ರೋಹಿತಾಕ್ಷ ಜಿ.ಪಂ. ಸಹಾಯಕ ಎಂಜಿನಿಯರ್‌

 ಶೀಘ್ರ ದುರಸ್ತಿಗೆ ಪ್ರಯತ್ನ
ರಸ್ತೆ ಸಂಪೂರ್ಣ ಕೆಟ್ಟು ಹೋದ ಬಗ್ಗೆ ಗ್ರಾಮಸ್ಥರ ದೂರಿನ ಮೇರೆಗೆ ಜಿ.ಪಂ. ಕಿರಿಯ ಎಂಜಿನಿಯರ್‌ ಅವರನ್ನು ಸ್ಥಳಕ್ಕೆ ಕರೆಯಿಸಿ ಮನವರಿಕೆ ಮಾಡಲಾಗಿದೆ. ಶೀಘ್ರ ದುರಸ್ತಿಗೊಳಿಸಲು ಪ್ರಯತ್ನಿಸಲಾಗುವುದು.
– ಸರ್ವೋತ್ತಮ ಗೌಡ
ಜಿ.ಪಂ. ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next