Advertisement
ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಮಾತನಾಡಿ, ಕಂಬಳಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಇಲ್ಲಿನ ಶ್ರೀ ಕಲ್ಕುಡ ಕಟ್ಟೆಯ ಬಳಿಯ ನೇತ್ರಾವತಿ ನದಿ ಕಿನಾರೆಯಲ್ಲಿ ಕರೆ ನಿರ್ಮಾಣ ಕೆಲಸ ಆಗಿದೆ. ಈ ಕರೆಯಲ್ಲಿ ಕುದಿ ಓಡಿಸುವುದಕ್ಕೆ ಅವಕಾಶ ನೀಡಲಾಗುವುದು. ಸಿದ್ಧತೆಗಳು ಅಂತಿಮ ಹಂತದಲ್ಲಿದ್ದು, ಈ ಬಾರಿಯ ಕಂಬಳವನ್ನು ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುವುದು. ಕಂಬಳದ ಸಭಾ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಶಾಸಕಿ ಎನ್. ಶಕುಂತಳಾ ಶೆಟ್ಟಿ, ಸಹಕಾರ ಮಹಾ ಮಂಡಲದ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರಕುಮಾರ್, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಸಹಿತ ಹಲವರು ಆಗಮಿಸಲಿದ್ದಾರೆ ಎಂದರು.
ಫೆ. 24ರಂದು ಬೆಳಗ್ಗೆ 10:31ರ ಬಳಿಕ ಕಂಬಳದ ಉದ್ಘಾಟನೆ ನಡೆಯಲಿದ್ದು, ಇದಕ್ಕೂ ಮೊದಲು ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಿಂದ ಕಂಬಳ ಕರೆಗೆ ಕಂಬಳ ಕೋಣಗಳನ್ನು ಅದ್ದೂರಿ ಮೆರವಣಿಗೆಯಲ್ಲಿ ಕರೆ ತರಲಾಗುವುದು. ಮೆರವಣಿಗೆ ತುಳುನಾಡ ಸಂಸ್ಕೃತಿಯನ್ನು ಬಿಂಬಿಸಲಿದೆ. ಸಂಜೆ 5:30ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಅತಿಥಿಗಳನ್ನು ಕೂಟೇಲು ಸೇತುವೆ ಬಳಿಯಿಂದ ವೈಭವದ ಮೆರವಣಿಗೆಯ ಮೂಲಕ ಸ್ವಾಗತಿಸಿ, ವೇದಿಕೆಗೆ ಕರೆತರಲಾಗುವುದು. ಈ ಬಾರಿಯ ಕಂಬಳಕ್ಕೆ 150 ಜತೆ ಕೋಣಗಳು ಭಾಗವಹಿಸುವ ನಿರೀಕ್ಷೆಯಿದ್ದು, ಒಂದು ಲಕ್ಷ ಜನರು ವೀಕ್ಷಿಸುವರು. ಕಂಬಳದ ದಿನ ಮಧ್ಯಾಹ್ನ ಅನ್ನಸಂತರ್ಪಣೆ, ಹಾಗೂ ಕಂಬಳ ವೀಕ್ಷಣೆಗೆ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಉಪ್ಪಿನಂಗಡಿ ಪೇಟೆಯಲ್ಲಿ ಫೆ. 15ರಂದು ಆಮಂತ್ರಣ ಪತ್ರ ವಿತರಣೆ ಕಾರ್ಯ ನಡೆಯಿಲಿದ್ದು, ಎಂದರು. ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಗೌರವಾಧ್ಯಕ್ಷ ಉಮೇಶ್ ಶೆಣೈ ನಂದಾವರ, ಪ್ರಧಾನ ಕಾರ್ಯದರ್ಶಿ ಬೆಳ್ಳಿಪ್ಪಾಡಿ ಕೈಪ ಕೇಶವ ಭಂಡಾರಿ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಕಾರ್ಯದರ್ಶಿ ಚಂದ್ರಶೇಖರ ಮಡಿವಾಳ, ಉಪಾಧ್ಯಕ್ಷ ರಾಮಚಂದ್ರ ಮಣಿಯಾಣಿ, ಗೌರವ ಸಲಹೆಗಾರ ಹರಿಶ್ಚಂದ್ರ ಇಳಂತಿಲ, ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ರಮೇಶ್ ಭಂಡಾರಿ, ನ್ಯಾಯವಾದಿ ರಾಘವೇಂದ್ರ ನಾಯಕ್, ವಾರಿಸೇನ ಜೈನ್, ಕೃಷ್ಣಪ್ರಸಾದ್ ಬೊಳ್ಳಾವು, ಯೋಗೀಶ್ ಸಾಮಾನಿ, ಆದರ್ಶ ಶೆಟ್ಟಿ ಕಜೆಕ್ಕಾರ್, ಜಯಂತ ಪೊರೋಳಿ, ಕಂಗ್ವೆ ವಿಶ್ವನಾಥ ಶೆಟ್ಟಿ, ಗಿರೀಶ್ ಸಾಲ್ಯಾನ್, ಕೃಷ್ಣಪ್ಪ, ಸಿದ್ದೀಕ್, ಇಮ್ತಿಯಾಜ್, ಹರೀಶ್ ಶೆಟ್ಟಿ, ಗಂಗಾಧರ, ದಾಸಪ್ಪ ಗೌಡ, ಸಂತೋಷ್ ಕುಕ್ಕಾಜೆ ಉಪಸ್ಥಿತರಿದ್ದರು.