ಉಪ್ಪಿನಂಗಡಿ: ಬುಧವಾರ ಸಂಜೆಯಿಂದ ಗುರುವಾರ ಬೆಳಗ್ಗಿನವರೆಗೆ ಉಪ್ಪಿನಂಗಡಿಯಲ್ಲಿ ಭಾರೀ ಮಳೆಯಾಗಿದ್ದು, ಹಲವು ಕಡೆ ಹಾನಿ ಸಂಭವಿಸಿದೆ. ಉಪ್ಪಿನಂಗಡಿ ಗ್ರಾಮದ ಲಕ್ಷ್ಮೀನಗರದ ಧರೆ ಕುಸಿದು ಪ್ರಫುಲ್ಲಾ ಎಂಬವರ ಮನೆಗೆ ಕೆಸರು ನೀರು ನುಗ್ಗಿದ್ದು, ಮನೆಗೆ ಹಾನಿಯಾಗಿದೆ. ರಾಮನಗರದಲ್ಲಿರುವ ಉಪ್ಪಿನಂಗಡಿ ಗ್ರಾ.ಪಂ. ನೀರಿನ ಟ್ಯಾಂಕ್‌ನ ತಡೆಗೋಡೆ ಸಹಿತ ಧರೆ ಕುಸಿದಿದ್ದು, ಹಿರೇಬಂಡಾಡಿ ಗ್ರಾಮದ ರೂಪಾ ಎಂಬವರ ಮನೆ ಭಾಗಶಃ ಹಾನಿಗೊಂಡಿದೆ. ನೀರಿನ ಟ್ಯಾಂಕ್ ಅಪಾಯದಲ್ಲಿದೆ. ಲಕ್ಷ್ಮೀನಗರದ ಗಿರಿಜಾ, ಮರಿಕೆಯ ಲಲಿತಾ ಹಾಗೂ ಚೆನ್ನಪ್ಪ ಅವರ ಮನೆಗೆ ಧರೆ ಕುಸಿದಿದೆ. ನಿನ್ನಿಕಲ್ಲು ಎಂಬಲ್ಲಿ ಅಮೀರ್ ಖಾನ್ ಎಂಬವರ ಜಾಗದಲ್ಲಿದ್ದ ತಡೆಗೋಡೆ ಧರೆಯ ಸಹಿತ ಕುಸಿದಿದ್ದು, ವಿದ್ಯುತ್ ಕಂಬಕ್ಕೆ ಹಾನಿಯಾಗುವ ಸಂಭವವಿದೆ. ಬದಿಯಲ್ಲಿರುವ ಮನೆಗಳಿಗೂ ಅಪಾಯದ ಸಾಧ್ಯತೆ ಎದುರಾಗಿದೆ.
34ನೇ ನೆಕ್ಕಿಲಾಡಿ ಗ್ರಾಮದ ಆದರ್ಶ ನಗರದ ಪದ್ಮಯ್ಯ ಗೌಡ, ಅಶ್ರಫ್, ಸಚಿನ್, ಶಾಂತಾರಾಮ ಎಂಬವರ ಮನೆ ಬಳಿಯ ಧರೆ ಕುಸಿದಿದೆ. ಸುಭಾಶ್ ನಗರದ ನಿರಾಲ ಎಂಬಲ್ಲಿ ಗುಡ್ಡದ ಮಣ್ಣು ಕುಸಿದು ರಸ್ತೆ ಸಂಪೂರ್ಣ ಬಂದ್ ಆಗಿದ್ದು, ಬಳಿಕ ಮಣ್ಣು ತೆರವುಗೊಳಿಸಿ ಸಂಚಾರಕ್ಕೆ ಅನುವುಮಾಡಿಕೊಡಲಾಗಿದೆ. ನೆಕ್ಕಿಲಾಡಿಯಲ್ಲಿ ಅಶ್ರಫ್ ಎಂಬವರ ಮನೆ ಬಳಿಯ ಧರೆಯೂ ಕುಸಿದಿದೆ. ಇಳಂತಿಲ ಗ್ರಾಮದ ಅಂಬೊಟ್ಟು ಎಂಬಲ್ಲಿ ರಸ್ತೆಗೆ ಧರೆ ಕುಸಿದು ಬಿದ್ದಿದೆ. ಕಡವಿನ ಬಾಗಿಲಿನ ಫಕ್ರುದ್ದೀನ್, ಅಶ್ರಫ್ ಎಂಬವರ ಮನೆಗೆ ಧರೆ ಕುಸಿದು, ಹಾನಿಯುಂಟಾಗಿದೆ.
ತಣ್ಣೀರುಪಂಥ ಗ್ರಾಮದ ಬೋವು ಎಂಬಲ್ಲಿ ಸಾರ್ವಜನಿಕರು ಹಾಗೂ ಗ್ರಾ.ಪಂ. ಅನುದಾನದಲ್ಲಿ ನಿರ್ಮಿಸಿದ ಕಾಲು ಸಂಕ ಹೊಳೆಯಲ್ಲಿ ಸಂಪೂರ್ಣ ಕೊಚ್ಚಿ ಹೋಗಿದ್ದು, ಸಂಪರ್ಕ ಕಡಿತಗೊಂಡಿದ್ದರಿಂದ ಅರ್ಬಿ ನಿವಾಸಿಗಳಿಗೆ ಕುಪ್ಪೆಟ್ಟಿಗೆ ಬರಲು ಸುತ್ತು ಬಳಸಿ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಉಪ್ಪಿನಂಗಡಿ ಗ್ರಾಮದ ಕೂಟೇಲು ಬಳಿಯ ನದಿ ಸಮೀಪವಿರುವ ಐತ ಮತ್ತು ಸಾಜು ಎಂಬವರ ಮನೆಗೆ ನೀರು ನುಗ್ಗುವ ಸಾಧ್ಯತೆಯನ್ನು ಮನಗಂಡ ಕಂದಾಯ ಅಧಿಕಾರಿಗಳು ಅವರನ್ನು ಬದಲಿ ಕಡೆ ವಾಸ್ತವ್ಯಕ್ಕೆ ಸೂಚಿಸಿದರಲ್ಲದೆ, ಅದು ಸಾಧ್ಯವಾಗದಿದ್ದರೆ, ಗಂಜಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸುವುದಾಗಿ ತಿಳಿಸಿದರು. ಸ್ಥಳಕ್ಕೆ ಪ್ರಭಾರ ಕಂದಾಯ ನಿರೀಕ್ಷಕ ರಮಾನಂದ ಚಕ್ಕಡಿ, ಗ್ರಾಮ ಕರಣಿಕ ಚಂದ್ರ ನಾಯ್ಕ, ಗ್ರಾಮ ಸಹಾಯಕರಾದ ಯತೀಶ್, ದಿವಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೈದುಂಬಿ ಹರಿವ ನದಿಗಳು
ಗುರುವಾರ ಬೆಳಗ್ಗಿನವರೆಗೆ ಉಪ್ಪಿನಂಗಡಿಯಲ್ಲಿ 157.4 ಮಿ.ಮೀ. ಮಳೆ ದಾಖಲಾಗಿದೆ. ಬೆಳಗ್ಗಿನ ಜಾವ ದಿಂದಲೇ ಉಪ್ಪಿನಂಗಡಿಯಲ್ಲಿ ಕುಮಾರ ಧಾರ, ನೇತ್ರಾವತಿ ನದಿಗಳು ಮೈದುಂಬಿ ಹರಿಯುತ್ತಿದ್ದು, ಬೆಳಗ್ಗೆ ನೇತ್ರಾವತಿ ನದಿ ನೀರಿನ ಮಟ್ಟ 23 ಮೀಟರ್ ಆಗಿತ್ತು. ಮಧ್ಯಾಹ್ನದ ಬಳಿಕ ನೀರಿನ ಹರಿವು ಕಡಿಮೆಯಾಗಿದ್ದು, ನೇತ್ರಾವತಿ ನದಿ ನೀರಿನ ಮಟ್ಟ 20 ಮೀಟರ್‌ಗೆ ತಲುಪಿದೆ.
ಮೋರಿ ಕುಸಿತ
ಬೊಲಂತಿಲ- ದರ್ಬೆ ರಸ್ತೆ ‘ನಮ್ಮ ಗ್ರಾಮ- ನಮ್ಮ ರಸ್ತೆ’ ಯೋಜನೆಯಡಿ ಅಭಿವೃದ್ಧಿಗೊಳ್ಳುತ್ತಿದ್ದು, ಕುದ್ಕೋಳಿ ಬಳಿ ಮೋರಿ ಕಾಮಗಾರಿಯು ನಿರ್ಮಾಣ ಹಂತದಲ್ಲಿರುವುದರಿಂದ ಬದಿಯಲ್ಲಿಯೇ ತಾತ್ಕಾಲಿಕವಾಗಿ ಹಾಕಲಾಗಿದ್ದ ಮೋರಿಯು ಸಂಪೂರ್ಣ ಕುಸಿದು ಬಿದ್ದಿದ್ದು, ಇದರಿಂದ ದರ್ಬೆ ಹಾಗೂ ತಾಳೆಹಿತ್ಲುವಿಗೆ ಹೋಗುವ ರಸ್ತೆ ಸಂಪರ್ಕವೇ ಕಡಿತಗೊಂಡಿದೆ. ಗುರುವಾರ ಸಂಜೆಯವರೆಗೂ ದ್ವಿಚಕ್ರ ವಾಹನವಲ್ಲದೆ, ಇತರ ವಾಹನಗಳು ತಾಳೆಹಿತ್ಲು ಹಾಗೂ ದರ್ಬೆಯ ಕಡೆ ಸಂಚರಿಸದಂತಹ ಸ್ಥಿತಿಯಿತ್ತು.