ಉಪ್ಪಿನಂಗಡಿ: ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗಲಿ ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿ ಹಾನಿಗೆ ಒಳಗಾಗಿ ನಷ್ಟ ಸಂಭವಿಸಿದೆ.
ಇಲ್ಲಿಗೆ ಸಮೀಪ ಮಠ ನಿವಾಸಿ ಅಸ್ಮಾಮ್ ಅವರ ಮನೆಯಲ್ಲಿ ಶನಿವಾರ ಮಧ್ಯಾಹ್ನ ಈ ಅವಘಡ ಸಂಭವಿಸಿತು. ಮನೆ ಮಾಲಕ ವಿದೇಶದಲ್ಲಿದ್ದು ಪತ್ನಿ ಖೌಸರೆ ಬೀಗ ಹಾಕಿ ತನ್ನ ಮಕ್ಕಳೊಂದಿಗೆ ಪೇಟೆಯತ್ತ ತೆರಳಿದ್ದರು. ಇದೇ ವೇಳೆ ಮನೆ ಒಳಗಿನಿಂದ ಏಕಾಏಕಿ ಹೊಗೆ ಕಾಣಿಸಿಕೊಂಡಿತ್ತು.
ಇದನ್ನು ಕಂಡ ಸ್ಥಳೀಯ ಸಿದ್ಧೀಕ್, ಅನಿಫ್, ಯು.ಟಿ. ಪಯಾಜ್, ಗ್ರಾ.ಪಂ.ಸದಸ್ಯ ಅಬ್ದುಲ್ ರಶೀದ್ ಮತ್ತಿತರರು ಬೆಂಕಿ ನಂದಿಸಲು ಯತ್ನಿಸಿದರೂ ಸಾಧ್ಯವಾಗದೆ ಪುತ್ತೂರು ಅಗ್ನಿಶಾಮಕ ದಳವನ್ನು ಕರೆಯಿಸಿ ಸತತ ಒಂದು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಯಿತು.
ಖೌಸರೆ ಅವರು ಮಂಗಳೂರಿಗೆ ತೆರಳಲೆಂದು ಉಪ್ಪಿನಂಗಡಿ ಬಸ್ ನಿಲ್ದಾಣ ತಲುಪುತ್ತಿದ್ದಂತೆ ಮನೆ ಪರಿಸರದವರು ಫೋನ್ ಮಾಡಿ ಬೆಂಕಿ ಅನಾಹುತದ ಮಾಹಿತಿ ನೀಡಿದರು. ಅವರು ಕೂಡಲೇ ಅಲ್ಲಿಂದ ವಾಪಸ್ ಬಂದಾಗ ಬೆಂಕಿ ಮನೆಯನ್ನು ವ್ಯಾಪಿಸಿತ್ತು.
ಬೆಂಕಿಯಿಂದಾಗಿ ಮನೆಯಲ್ಲಿದ್ದ ಫ್ರಿಡ್ಜ್, ವಾಶಿಂಗ್ ಮೆಶಿನ್ ಪೀಠೊಪಕರಣಗಳ ಸಹಿತ ಬೆಲೆಬಾಳುವ ಬಟ್ಟೆ ಬರೆ ಸಹಿತ ಹಲವು ಸಾಮಗ್ರಿಗಳು, ದಾಖಲೆ ಪತ್ರಗಳು ಸುಟ್ಟುಹೋಗಿರುವುದಾಗಿ ಅಗ್ನಿಶಾಮಕ ಠಾಣಾಧಿಕಾರಿ ಶಂಕರ ತಿಳಿಸಿದ್ದಾರೆ.
ಶಾರ್ಟ್ ಸರ್ಕ್ಯೂಟ್ ಕಾರಣ?
ಕೆಲವು ವರ್ಷಗಳ ಹಿಂದಷ್ಟೆ ಮನೆ ನಿರ್ಮಾಣಗೊಳಿಸಲಾಗಿತ್ತು ಎನ್ನಲಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಸಂಭವಿಸಿದೆ ಎನ್ನಲಾಗಿದೆ.