Advertisement

Uppinangady: 2019ರ ಬಳಿಕ ನೇತ್ರಾವತಿ-ಕುಮಾರಾಧಾರಾ ನದಿಗಳ ಸಂಗಮ

01:25 AM Jul 31, 2024 | Team Udayavani |

ಉಪ್ಪಿನಂಗಡಿ: ಸತತ ಮಳೆಯಿಂದಾಗಿ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳೆರಡು ಉಕ್ಕಿ ಹರಿದು ಮಂಗಳವಾರ ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ನದಿಗಳೆರಡು ಸಂಗಮಿಸಿ ಬಾಗಿನ ಸಮರ್ಪಣ, ಗಂಗಾ ಪೂಜಾ ಹಾಗೂ ಪವಿತ್ರ ಸಂಗಮ ತೀರ್ಥ ಸ್ನಾನ ಜರಗಿತು. 2019ರ ಬಳಿಕ ಇದೇ ಮೊದಲ ಬಾರಿ ಇಲ್ಲಿ ಸಂಗಮ ನೆರವೇರಿದೆ.

Advertisement

ಮಂಗಳವಾರ ಮಧ್ಯಾಹ್ನದಿಂದ ಅಪಾಯದ ಮಟ್ಟವನ್ನು ಮೀರಿ ಹರಿದ ನೇತ್ರಾವತಿ ದೇವಾಲಯದ ಮಹಾಕಾಳಿ ಅಮ್ಮನವರ ಗುಡಿಯನ್ನು ಆವರಿಸಿ ಹರಿಯತೊಡಗಿತು. ಆ ಬಳಿಕ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗಕ್ಕೆ ವಿಸ್ತರಿಸಿ ಹರಿಯತೊಡಗಿದ ನೇತ್ರಾವತಿ ಸಾಯಂಕಾಲ 6ಕ್ಕೆ ದೇವಾಲಯದ ಪ್ರಾಂಗಣವನ್ನು ಪ್ರವೇಶಿಸಿತು. ಆಬಳಿಕ ಕುಮಾರಧಾರಾ ನದಿಯು ಏರಿಕೆಯ ಗತಿಯನ್ನು ಕಂಡು ದೇವಾಲಯದ ಪ್ರಾಂಗಣಕ್ಕೆ ಹರಿಯತೊಡಗಿತು.

ಸಂಗಮ ವೀಕ್ಷಣೆಗೆ ಜನ ಸಾಗರ: ನದಿಗಳೆರಡು ಸಂಗಮಿಸಿ ಪವಿತ್ರ ಸಂಗಮ ಪೂಜೆ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ದೇಗುಲದತ್ತ ಆಗಮಿಸಿದರು.

ತಗ್ಗು ಪ್ರದೇಶಗಳೆಲ್ಲ ಜಲಾವೃತ: ಅತಿಯಾದ ಮಳೆಯಿಂದಾಗಿ ಕೊಪ್ಪಳ ಎಂಬಲ್ಲಿ ಮನೆಯೊಂದು ಕುಸಿದು ಬಿದ್ದಿದೆ. ಉಪ್ಪಿನಂಗಡಿ ಗ್ರಾಮದ ಪಂಜಳ, ಕಜೆಕ್ಕಾರ್‌, ನೂಜಿ, ನಟ್ಟಿಬೈಲು ಪ್ರದೇಶಗಳಲ್ಲಿನ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಅಲ್ಲಿನ ಅಪಾಯಕ್ಕೆ ಸಿಲುಕಿದ ನಿವಾಸಿಗರನ್ನು ಸ್ಥಳಾಂತರಿಸಲಾಗಿದೆ.

Advertisement

ನೆರೆ ಭೀತಿಗೆ ಕಂಗೆಟ್ಟ ಜನತೆ : ಉಭಯ ನದಿಗಳೂ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಜತೆಗೆ ಭಾರೀ ಮಳೆಯಾಗುತ್ತಿರುವುದರಿಂದ ಈ ಬಾರಿಯೂ ಪೇಟೆ ನೆರೆ ಹಾವಳಿಗೆ ತುತ್ತಾಗುವ ಭೀತಿಯನ್ನು ಮೂಡಿಸಿದೆ.
ಹಲವು ಮನೆಗಳು ಜಲಾವೃತ: ಹಳೆಗೇಟು ಬಳಿಯ ಐತ ಮುಗೇರ ಅವರ ಮನೆಯು ನೀರಿನಿಂದ ಜಲಾವೃತಗೊಂಡಿದೆ. ಇಲ್ಲಿನ ಹಲವು ವಸತಿ ಸಂಕೀರ್ಣ, ಮನೆಗಳು ಜಲಾವೃತವಾಗಿವೆ. ಮಠ ಹಿರ್ತಡ್ಕದಲ್ಲಿ ಸುಮಾರು 4-5 ಮನೆಗಳಿಗೆ ನದಿ ನೀರಿನಲ್ಲಿ ಮುಳುಗಡೆಯಾಗುವ ಭೀತಿಯಿದೆ.

ಬಂಡೆ ಕುಸಿತದ ಭೀತಿ: ಪಂಜಳದ ರಾಷ್ಟ್ರೀಯ ಹೆದ್ದಾರಿ ಬಳಿಯ ಪೆಟ್ರೋಲ್‌ ಪಂಪ್‌ವೊಂದರ ಸಮೀಪ ಹೆದ್ದಾರಿ ಚತುಷ್ಪಥ ಕಾಮಗಾರಿಗಾಗಿ ಗುಡ್ಡವನ್ನು ಅಗೆದಿದ್ದು, ಇದು ಮಳೆಗೆ ಇನ್ನಷ್ಟು ಜರಿಯುತ್ತಿದೆ. ಈ ಗುಡ್ಡದ ನಡುವಲ್ಲಿ ಎರಡು ಬೃಹತ್‌ ಬಂಡೆಕಲ್ಲುಗಳಿದ್ದು, ಅದರಡಿಯ ಮಣ್ಣು ಮಳೆಗೆ ಕರಗುತ್ತಿರುವುದರಿಂದ ಅದು ಕುಸಿದು ಬೀಳುವ ಆತಂಕ ಎದುರಾಗಿದೆ.

ಬಾಗಿನ ಸಮರ್ಪಣೆ, ಗಂಗಾಪೂಜೆ
ನೇತ್ರಾವತಿ   – ಕುಮಾರಧಾರಾ ನದಿಗಳೆರಡು ಶ್ರೀ ಸಹಸ್ರಲಿಂಗೇಶ್ವರ ದೇಗುಲದ ಮುಂಭಾಗದಲ್ಲಿ ಮತ್ತೆ ಸಂಗಮಿಸಿ ಆಗುವ ಪವಿತ್ರ ಸಂಗಮದ ವೇಳೆ ಶಾಸಕ ಅಶೋಕ್‌ ಕುಮಾರ್‌ ರೈ ಅವರ ಉಪಸ್ಥಿತಿಯಲ್ಲಿ ಬಾಗಿನ ಸಮರ್ಪಣೆ, ಗಂಗಾ ಪೂಜಾ ವಿಧಿ ವಿಧಾನಗಳು ಜರಗಿ ಪವಿತ್ರ ಸಂಗಮ ತೀರ್ಥ ಸ್ನಾನ ನೆರವೇರಿತು.

ಪ್ರಧಾನ ಅರ್ಚಕ ಹರೀಶ್‌ ಉಪಾಧ್ಯಾಯರವರ ವೇದಮಂತ್ರ ಘೋಷಣೆಯೊಂದಿಗೆ ಗಂಗಾ ಪೂಜೆ ನಡೆಯಿತು. ಗಂಗಾ ಮಾತೆಗೆ ಬಾಗಿನ ಸಮರ್ಪಿಸಿ ಪ್ರಾರ್ಥಿಸಲಾಯಿತು. ಗಂಗಾಮಾತೆಗೆ ಜೈಕಾರ ಹಾಕಿದ ಭಕ್ತರು ತೀರ್ಥ ಸಂಪ್ರೋಕ್ಷಣೆ ಗೈದರು. ಹಲವರು ತೀರ್ಥ ಸ್ನಾನ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರುಗಳಾದ ಸಂಜೀವ ಮಠಂದೂರು, ಅರುಣ್‌ ಕುಮಾರ್‌ ಪುತ್ತಿಲ, ತಹಶೀಲ್ದಾರ್‌ ಪುರಂದರ, ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಯಕ್‌ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next