ಉಪ್ಪಿನಂಗಡಿ: ಇಲ್ಲಿನ ಹಳೆ ಬಸ್ ಸ್ಟಾಂಡ್‌ನಲ್ಲಿ ಇಂಟರ್‌ಲಾಕ್ ಕಾಮಗಾರಿಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಶಿಲಾನ್ಯಾಸ ನಡೆಸಿ 10 ತಿಂಗಳು ಕಳೆದರೂ ಅದು ಇನ್ನೂ ಆರಂಭವಾಗದಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಲಾರಂಭಿಸಿದ್ದಾರೆ.
ಇಲ್ಲಿಗೆ ಶಾಸಕರು 10 ಲಕ್ಷ ರೂ. ಸ್ವಂತ ಅನುದಾನವನ್ನು ಬಿಡುಗಡೆಗೊಳಿಸಿ ಶಿಲಾ ನ್ಯಾಸ ನಡೆಸಿದ್ದರು. ಆದರೆ ಈ ತನಕ ಕೆಲಸ ಆರಂಭಿಸದೇ ನನೆಗುದಿಗೆ ಬಿದ್ದಂತಾಗಿದೆ.
ಈ ಜಾಗವು ಪಟ್ಟಣದ ಬ್ಯಾಂಕ್ ರಸ್ತೆಯಲ್ಲಿ ಎದ್ದು ಕಾಣುತ್ತಿದ್ದು, ಅದು ಗ್ರಾ.ಪಂ.ನ ಗತಕಾಲದ ಬಸ್ ನಿಲ್ದಾಣ ಆಗಿತ್ತು. ಆದರೆ ಅಭಿವೃದ್ಧಿಯತ್ತ ಗ್ರಾಮ ಸಾಗುತ್ತಿದ್ದಾಗ ವಾಹನ ದಟ್ಟಣೆ ಹೆಚ್ಚಿದ ಕಾರಣಕ್ಕೆ ಬೆಳ್ತಂಗಡಿ-ಪುತ್ತೂರು ನಡುವಣ ರಾಜ್ಯ ಹೆದ್ದಾರಿ ಬದಿ ಗ್ರಾ.ಪಂ.ನ 2 ಎಕ್ರೆ ಜಾಗದಲ್ಲಿ ಹೊಸ ಬಸ್ ನಿಲ್ದಾಣ ಮಾಡಲಾಯಿತು. ಬಳಿಕ ಅಲ್ಲಿಗೆ ಸರಕಾರಿ ಹಾಗೂ ಖಾಸಗಿ ಬಸ್ ಸ್ಥಳಾಂತರವಾಯಿತು. ಬಳಿಕ ಹಳೆ ಬಸ್ ನಿಲ್ದಾಣದಲ್ಲಿ ರಿûಾ ಪಾರ್ಕಿಂಗ್ ಹಾಗೂ ಹಿರೇಬಂಡಾಡಿ, ಬಜತ್ತೂರು ಕಡೆಗೆ ತೆರಳುವ ಜೀಪುಗಳು ಪ್ರಯಾಣಿಕರನ್ನು ಒಯ್ಯುವ ಸೇವೆಯೊಂದಿಗೆ ಕಾರ್ಯಾಚರಿಸುತ್ತಿದ್ದು, ಆಸುಪಾಸಿನಲ್ಲಿ ವಾಣಿಜ್ಯ ಕಟ್ಟಡಗಳು ಬೆಳೆದು ನಿಂತಿದೆ.
ಗೆಳೆಯರ ಬಳಗ ಸಂಘಟನೆಯ ಅಧ್ಯಕ್ಷ ಗುಣಾಕರ ಅಗ್ನಾಡಿ ಕಾಮಗಾರಿ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿ ಶಾಸಕರ ಬಳಿ ಎರಡು ಬಾರಿ ನಿಯೋಗ ತೆರಳಿ ವಿಳಂಬದ ಮನವರಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಶಾಸಕರ ಗಮನಕ್ಕೆ ತರಲಾಗಿದೆ
ಕಾಮಗಾರಿ ಕೆಲವು ಕಾರಣದಿಂದ ವಿಳಂಬವಾಗಿದೆ. ಈಗಾಗಲೇ ಶಾಸಕರ ಗಮನಕ್ಕೆ ತರಲಾಗಿದೆ. ಶೀಘ್ರವೇ ಕೆಲಸ ಆರಂಭಿಸಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸಂಬಂಧಪಟ್ಟವರಿಗೆ ಶಾಸಕರು ಸೂಚಿಸಿದ್ದಾರೆ.
-ಉಷಾ ಮುಳಿಯ, ಗ್ರಾ.ಪಂ. ಅಧ್ಯಕ್ಷರು, ಉಪ್ಪಿನಂಗಡಿ