ಉಪ್ಪಿನಂಗಡಿ: ವೇದಶಂಕರ ನಗರದಲ್ಲಿರುವ ಶ್ರೀರಾಮ ವಿದ್ಯಾ ಸಂಸ್ಥೆ, ಉಪ್ಪಿನಂಗಡಿ ಗ್ರಾಮ ವಿಕಾಸ ಸಮಿತಿ, ವಿಜಯಾ ಗ್ರಾಮೀಣ ಪ್ರತಿಷ್ಠಾನ, ಸಿ.ಎ. ಬ್ಯಾಂಕ್ ಉಪ್ಪಿನಂಗಡಿ ಇದರ ಸಹಯೋಗದಲ್ಲಿ ಬಜತ್ತೂರು ಗ್ರಾಮದ ವಳಾಲು ರೆಂಜಾಳ ವೆಂಕಪ್ಪ ಗೌಡ ಅವರ ಭತ್ತದ ಗದ್ದೆಯಲ್ಲಿ ಶಾಲಾ ವಿದ್ಯಾರ್ಥಿಗಳ ಕೃಷಿ ಅಧ್ಯಯನ ಭೇಟಿ ಕಾರ್ಯಕ್ರಮವು ಶುಕ್ರವಾರ ನಡೆಯಿತು.
ಶ್ರೀರಾಮ ಶಾಲಾ ನೂತನ ಪರಿಸರ ಮತ್ತು ವಿಜ್ಞಾನ ಸಂಘವನ್ನು ವಿಜಯಾ ಬ್ಯಾಂಕಿನ ಉಪ್ಪಿನಂಗಡಿ ಶಾಖಾ ಪ್ರಬಂಧಕ ನಿತೇಶ್ ಶೆಣೈ ಅವರು ಉದ್ಘಾಟಿಸಿ ಮಾತನಾಡಿ, ಪರಿಸರದೊಂದಿಗೆ ನಮ್ಮ ಸಂಬಂಧವನ್ನು ಗಟ್ಟಿಗೊಳಿಸಲು ವಿದ್ಯಾಸಂಸ್ಥೆಗಳು ಮುಂದಾಗುತ್ತಿರುವುದು ಶ್ಲಾಘನೀಯ ಎಂದರು.
ವೆಂಕಪ್ಪ ಗೌಡ ದಂಪತಿಯನ್ನು ಸಮ್ಮಾನಿಸಿ ಮಾತನಾಡಿದ ಉಪ್ಪಿನಂಗಡಿ ಸಿ.ಎ. ಬ್ಯಾಂಕಿನ ಅಧ್ಯಕ್ಷ ಯಶವಂತ ಜಿ., ಅನ್ನ ನೀಡುವ ಮಣ್ಣಿನೊಂದಿಗೆ ನಮ್ಮ ಒಡನಾಟ ಎಂದಿಗೂ ಸೋಲದು. ಕೃಷಿ ಕಾರ್ಯ ಜೀವನೋತ್ಸಾಹವನ್ನು ಸದಾ ಕಾಲ ಜೀವಂತವಾಗಿರಿಸುತ್ತದೆ ಎಂದರು. ಗ್ರಾಮ ವಿಕಾಸದ ಪ್ರತಿನಿಧಿ ಸುಧಾಕರ ಶೆಟ್ಟಿ ಮಾತನಾಡಿ, ಶ್ರೇಷ್ಠ ಕಾಯಕವಾಗಿರುವ ಕೃಷಿ ಕಾರ್ಯದ ಬಗ್ಗೆ ಸಮಾಜದ ದೃಷ್ಟಿಕೋನ ಬದಲಾಗಬೇಕಾಗಿದೆ. ಅನ್ನ ನೀಡುವ ರೈತ ಸದಾ ಕಾಲ ಗೌರವಕ್ಕೆ ಒಳಗಾಗಬೇಕು ಎನ್ನುವ ಆಶಯದೊಂದಿಗೆ ಭತ್ತ ಕೃಷಿಯ ಸವಿ ಅನುಭವಿಸಲು ಮತ್ತು ಆ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಗ್ರಾಮೀಣ ಪ್ರತಿಷ್ಠಾನದ ಸಿಇಒ ಸದಾಶಿವ ಆಚಾರ್ಯ ಅವರು ವಿದ್ಯಾರ್ಥಿಗಳಿಗೆ ತರಕಾರಿ ಬೀಜಗಳನ್ನು ವಿತರಿಸಿದರು. ಮೀನಾಕ್ಷಿ ಅವರು ಪಾಡ್ಡನ ಹಾಡಿದರು. ಓ ಬೇಲೆ ಹಾಡಿನೊಂದಿಗೆ ಶಾಲಾ ಮಕ್ಕಳು ಗದ್ದೆಯಲ್ಲಿ ಭತ್ತದ ನೇಜಿ ನೆಟ್ಟರು. ಶಾಲಾ ಶಿಕ್ಷಕ ಮತ್ತು ಪೋಷಕ ಸಂಘದ ಅಧ್ಯಕ್ಷ ಜಯಂತ ಪುರೋಳಿ, ಶಾಲಾ ಸಂಚಾಲಕಿ ಯು.ಜಿ. ರಾಧಾ ಪಾಲ್ಗೊಂಡರು.