ಉಪ್ಪಿನಂಗಡಿ: ಗ್ರಾ.ಪಂ.ನ ಕುಡಿಯುವ ನೀರನ್ನು ದುರ್ಬಳಕೆ ಮಾಡು ವವರನ್ನು ಪತ್ತೆ ಹಚ್ಚಲು ಗುರುವಾರದಿಂದ ವಾರ್ಡ್ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲು ಗ್ರಾ.ಪಂ.ನ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ ತೀರ್ಮಾನಿಸಿದೆ.
ಗ್ರಾ.ಪಂ. ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ. ಅವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಕಚೇರಿಯಲ್ಲಿ ಬುಧವಾರ ನಡೆದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ., ಕೆಲವರು ಪಂಚಾಯತ್‌ನ ಕುಡಿಯುವ ನೀರನ್ನು ಕೃಷಿ ಕಾರ್ಯಗಳಿಗೆ ಬಳಸುತ್ತಿರುವುದು ಕಂಡುಬಂದಿದೆ. ಇನ್ನು ಕೆಲವು ಕಡೆ ಕುಡಿಯುವ ನೀರು ಅನಗತ್ಯವಾಗಿ ಪೋಲಾಗುತ್ತಿದೆ. ಬೇಸಗೆಯಲ್ಲಿ ಕುಡಿಯುವ ನೀರಿಗೆ ಕೊರತೆಯಿದ್ದು, ಆದ್ದರಿಂದ ನೀರನ್ನು ನಾಜೂಕಾಗಿ ಬಳಸಬೇಕು. ಅಗತ್ಯ ಕೆಲಸಗಳನ್ನು ಬಿಟ್ಟು ಇನ್ನಿತರ ಕಾರ್ಯಗಳಿಗೆ ಕುಡಿಯುವ ನೀರನ್ನು ದುರ್ಬಳಕೆಯಾಗಬಾರದು. ಇದನ್ನು ತಡೆಯುವ ನಿಟ್ಟಿನಲ್ಲಿ ಗ್ರಾ.ಪಂ.ನ ಪ್ರತಿ ವಾರ್ಡ್‌ನಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿಯ ಸದಸ್ಯರು ಕಾರ್ಯಾಚರಣೆ ನಡೆಸಲಿದ್ದಾರೆ. ನೀರು ದುರ್ಬಳಕೆಯಾಗುತ್ತಿರುವುದು ಕಂಡು ಬಂದಲ್ಲಿ. ಅಂಥವರ ಕುಡಿಯುವ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು. ಮತ್ತೆ ಮಳೆಗಾಲ ಪ್ರಾರಂಭವಾಗುವವರೆಗೆ ಕುಡಿಯುವ ನೀರಿನ ಸಂಪರ್ಕ ನೀಡುವು ದಿಲ್ಲ. ನಾಳೆಯಿಂದಲೇ ಈ ಕಾರ್ಯಾಚರಣೆ ಆರಂಭವಾಗಲಿದೆ ಎಂದರು.
ಸಮಿತಿಯ ಕೋಶಾಧಿಕಾರಿ ಉಷಾ ಚಂದ್ರ ಮುಳಿಯ ಮಾತನಾಡಿ, ನೇತ್ರಾವತಿ ನದಿಯಲ್ಲಿ ಬಟ್ಟೆ ಒಗೆಯುವುದು, ವಾಹನಗಳನ್ನು ತೊಳೆಯುವುದು ಕಂಡು ಬರುತ್ತಿದೆ. ಇದರಿಂದಾಗಿ ಕುಡಿಯುವ ನೀರು ಮಲಿನಗೊಳ್ಳುತ್ತಿದೆ ಎಂದು ದೂರಿದರು.
ಅಧಿಕಾರಿ, ಸಿಬಂದಿ ತರಾಟೆಗೆ
ಸಭೆಗಳಲ್ಲಿ ನಿರ್ಣಯವಾದರೂ ಆ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಶೀಘ್ರ ನಿರ್ಣಯ ಅನುಷ್ಠಾನವಾಗುವಂತೆ ಮಾಡುತ್ತಿಲ್ಲ ಎಂದು ಪಂಚಾಯತ್‌ನ ಅಧಿಕಾರಿಗಳನ್ನು ಪಂಚಾಯತ್ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ. ಈ ಸಂದರ್ಭ ತರಾಟೆಗೆ ತೆಗೆದುಕೊಂಡರು. ಅಲ್ಲದೇ, ಪಂಚಾಯತ್ ರಾಜ್ ಕಾಯ್ದೆಯನ್ನು ಉಲ್ಲಂಘಿಸಿದಂತೆ ಸೂಚಿಸಿದರು.
ಸಮಿತಿ ಸದಸ್ಯ ಮುಹಮ್ಮದ್ ಕೆಂಪಿ ಮಾತನಾಡಿ, ಬಸ್ ನಿಲ್ದಾಣದ ಬಳಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ವೊಂದರಿಂದ ನದಿಗೆ ಮಲಿನ ನೀರು ಬಿಡುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಜ್ಯೂನಿಯರ್ ಕಾಲೇಜಿನಿಂದ ಹಿಡಿದು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದವರೆಗೆ ಅಲ್ಲಲ್ಲಿ ಮಲೀನ ನೀರು ನದಿಯನ್ನು ಸೇರುತ್ತಿದ್ದು, ಈ ಬಗ್ಗೆಯೂ ಕ್ರಮ ಕೈಗೊಳ್ಳ ಬೇಕೆಂಬ ಒತ್ತಾಯ ಕೇಳಿಬಂತು.
ನದಿ ಮಲಿನಗೊಳಿಸದಂತೆ ಸೂಚಿಸುವ ನಾಮಫಲಕ
ಗ್ರಾ.ಪಂ. ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ. ಮಾತನಾಡಿ, ನದಿ ನೀರನ್ನು ಮಲಿನಗೊಳಿಸುತ್ತಿರುವವ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಫಲಕವನ್ನು ನದಿ ಬದಿ ಅಲ್ಲಲ್ಲಿ ಅಳವಡಿಸುವಂತೆ ಪಿಡಿಒಗೆ ಸೂಚಿಸಿದರು. ನದಿ ತೀರದ ಬಳಿ ಡೇರೆ ಹಾಕಿಕೊಂಡು ವಾಸವಾಗಿರುವ ಕಾರ್ಮಿಕರಲ್ಲಿಗೆ ತೆರಳಿ ಅವರಿಗೆ ಎಚ್ಚರಿಕೆ ನೀಡಲು ನಿರ್ಣಯ ಕೈಗೊಳ್ಳಲಾಯಿತು.