ಉಪ್ಪಿನಂಗಡಿ: ಹತ್ತನೇ ತರಗತಿ ವಿದ್ಯಾರ್ಥಿನಿ ಹೆಣ್ಣು ಮಗುವಿಗೆ ಸಹಜ ಹೆರಿಗೆಯಲ್ಲಿ ಜನ್ಮ ನೀಡಿದ ಘಟನೆ ನಡೆದಿದ್ದು, ಘಟನೆಗೆ ಕಾರಣನಾದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರೌಢಶಾಲೆಯೊಂದರಲ್ಲಿ ಪ್ರಸಕ್ತ ಹತ್ತನೇ ತರಗತಿ ಕಲಿಯುತ್ತಿರುವ ಈ ವಿದ್ಯಾರ್ಥಿನಿಯ ಉದರದಲ್ಲಿ ಗೆಡ್ಡೆ ಬೆಳೆದಿದೆ ಎಂದು ತಿಳಿದು ಹೆತ್ತವರು ಆಸ್ಪತ್ರೆಗೆ ದಾಖಲಿಸಿದಾಗ ಆಕೆ ತುಂಬು ಗರ್ಭವತಿಯಾಗಿರುವುದು ಬೆಳಕಿಗೆ ಬಂದಿತ್ತು.
ಆಕೆ ಮಂಗಳೂರು ಪರಿಸರದ ಆಸ್ಪತ್ರೆಯೊಂದರಲ್ಲಿ ಗುರುವಾರ ಸಹಜ ಹೆರಿಗೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆಸ್ಪತ್ರೆಯ ವೈದ್ಯಾಧಿಕಾರಿಗಳು ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸರ ಗಮನಕ್ಕೆ ತಂದಿದ್ದರು.
ಇದನ್ನೂ ಓದಿ:ಮೈಸೂರು: ಪರಿಷತ್ ಚುನಾವಣೆಗೆ ಕಾಂಗ್ರೆಸ್ ನಿಂದ ಒಬ್ಬರೇ ಅಭ್ಯರ್ಥಿ ಕಣಕ್ಕೆ
ಈ ಬಗ್ಗೆ ವಿದ್ಯಾರ್ಥಿನಿಯನ್ನು ವಿಚಾರಿಸಿದಾಗ ಹಿರೆಬಂಡಾಡಿ ಗ್ರಾಮದ ಮದ್ಮೆತ್ತಿಮಾರು ಮನೆ ನಿವಾಸಿ ಕೇಶವ (34 ವ) ತನ್ನನ್ನು ಅತ್ಯಾಚಾರವೆಸಗಿರುವುದನ್ನು ತಿಳಿಸಿದ್ದಾಳೆ.
ಈ ಹಿನ್ನೆಲೆಯಲ್ಲಿ ಅವಿವಾಹಿತ ಕೇಶವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅಪ್ರಾಪ್ತ ವಯಸ್ಕರ ಮೇಲಿನ ಅತ್ಯಾಚಾರ ನಿಯಂತ್ರಣ ಕಾಯ್ದೆಯಡಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.