ಪ್ರಿಯಾಂಕ ಉಪೇಂದ್ರ ಅಭಿನಯದ “ದೇವಕಿ’ ಜುಲೈ 5 ರಂದು ಬಿಡುಗಡೆಯಾಗುತ್ತಿರುವುದು ಗೊತ್ತೇ ಇದೆ. ಕನ್ನಡ ಭಾಷೆ ಜೊತೆಗೆ ತಮಿಳು ಭಾಷೆಯಲ್ಲೂ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದು ವಿಶೇಷ. ಚಿತ್ರದ ಮತ್ತೂಂದು ವಿಶೇಷವೆಂದರೆ, ಉಪೇಂದ್ರ ಅವರು ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಹೌದು, ಚಿತ್ರದ ಕ್ಲೈಮ್ಯಾಕ್ಸ್ ವೇಳೆ ಉಪೇಂದ್ರ ಅವರು ನಿರೂಪಣೆ ಮಾಡಿದ್ದಾರೆ.
ಕ್ಲೈಮ್ಯಾಕ್ಸ್ ಭಾಗದ ದೃಶ್ಯಕ್ಕೆ ಉಪೇಂದ್ರ ಅವರ ಧ್ವನಿ ಇದ್ದರೆ ಚೆನ್ನಾಗಿರುತ್ತೆ ಎಂಬುದನ್ನು ಮನಗಂಡ ನಿರ್ದೇಶಕ ಲೋಹಿತ್, ಉಪೇಂದ್ರ ಅವರನ್ನು ಸಂಪರ್ಕಿಸಿ, ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರಣ ವಿವರಿಸಿದಾಗ, ಸ್ವತಃ ಉಪೇಂದ್ರ ಅವರೇ, ಇಷ್ಟಪಟ್ಟು ಕ್ಲೈಮ್ಯಾಕ್ಸ್ ಹಂತದಲ್ಲಿ ಬರುವ ಪ್ರಮುಖ ದೃಶ್ಯವನ್ನು ನರೇಷನ್ ಮಾಡಿದ್ದಾರೆ.
ಸುಮಾರು ಒಂದು ನಿಮಿಷದ ಕಾಲ ಬರುವ ದೃಶ್ಯದಲ್ಲಿ ಅಮ್ಮ- ಮಗಳ ಎಮೋಷನ್ಸ್, ಹಾಗು ತನ್ನ ಮಗಳಿಗಾಗಿ ಎಷ್ಟೆಲ್ಲಾ ತ್ಯಾಗ ಮಾಡುತ್ತಾಳೆ ಎಂಬುದರ ಕುರಿತು ತಮ್ಮದೇ ಧ್ವನಿಯಲ್ಲಿ ನರೇಷನ್ ಮಾಡಿರುವುದು ವಿಶೇಷ ಎಂಬುದು ನಿರ್ದೇಶಕರ ಮಾತು. ಇನ್ನು, “ದೇವಕಿ’ ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ಅವರ ಪುತ್ರಿ ಐಶ್ವರ್ಯಾ ನಟಿಸಿದ್ದಾರೆ ಎಂಬುದೂ ಗೊತ್ತಿರುವ ವಿಚಾರ.
ಆದರೆ, ಪ್ರಿಯಾಂಕ ಅವರ ತಾಯಿ ಕೂಡ ದೃಶ್ಯವೊಂದರಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ಇನ್ನೊಂದು ವಿಶೇಷ. ಹೌದು, ಅವರ ತಾಯಿ ಸಮೀರಾ ಅವರು ಕೂಡ ನಟಿಸಿದ್ದಾರೆ. ಚಿತ್ರದ ಒಂದು ದೃಶ್ಯದಲ್ಲಿ ಅವರಿದ್ದಾರೆ. ಅದು ಯಾವ ಪಾತ್ರ, ಯಾಕೆ ಬರುತ್ತೆ ಎಂಬುದಕ್ಕೆ ಸಿನಿಮಾ ನೋಡಬೇಕೆಂಬುದು ಲೋಹಿತ್ ಮಾತು.
ಅಲ್ಲಿಗೆ ಈ ಚಿತ್ರದಲ್ಲಿ ಮೂರು ಜನರೇಷನ್ ನಟನೆ ಇದೆ ಎಂಬಂತಾಯ್ತು. “ದೇವಕಿ’ ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ಪ್ರೇಕ್ಷಕರಿಗೆ ನೈಜ ಅನುಭವ ಕಟ್ಟಿಕೊಡುವ ಸಿನಿಮಾ ಎನ್ನಲಾಗಿದೆ. ಕಿಶೋರ್ ಚಿತ್ರದಲ್ಲಿ ಕೊಲ್ಕತ್ತಾ ಕಾಪ್ ಆಗಿ ಕಾಣಿಸಿಕೊಂಡಿದ್ದಾರೆ.
ಚಿತ್ರಕ್ಕೆ ವೇಣು ಛಾಯಾಗ್ರಹಣವಿದೆ. ನೊಬಿನ್ ಪಾಲ್ ಸಂಗೀತವಿದೆ. ರವಿಚಂದ್ರ ಅವರ ಸಂಕಲನವಿದೆ. ರವಿವರ್ಮ ಸಾಹಸ ಮಾಡಿದ್ದಾರೆ. ಚಿತ್ರವನ್ನು ರವೀಶ್ ಮತ್ತು ಅಕ್ಷಯ್ ನಿರ್ಮಾಣ ಮಾಡಿದ್ದಾರೆ. ಗುರುಪ್ರಸಾದ್ ಅವರ ಸಂಭಾಷಣೆ ಚಿತ್ರಕ್ಕಿದೆ.