Advertisement

ಏತ ನೀರಾವರಿಗೆ ಶೀಘ್ರ ಚಾಲನೆ

10:00 AM Jun 02, 2019 | Suhan S |

ಕೊಪ್ಪಳ: ಬಹು ವರ್ಷಗಳ ಬೇಡಿಕೆಯಾಗಿದ್ದ ಅಳವಂಡಿ- ಬೆಟಗೇರಿ ಏತ ನೀರಾವರಿ ಯೋಜನೆಗೆ ತಿಂಗಳೊಳಗೆ ಚಾಲನೆ ನೀಡಲಾಗುವುದು ಎಂದು ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

Advertisement

ತಾಲೂಕಿನ ಹನುಕುಂಟಿ ಸಮೀಪದ ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯ ಕಾಮಗಾರಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಮಾತನಾಡಿದರು. ಈ ಏತ ನೀರಾವರಿ ಯೋಜನೆ 30 ವರ್ಷಗಳ ಕಾಲದ ಹೋರಾಟವಾಗಿದೆ. ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕೆಂದು ಹಲವು ವರ್ಷಗಲ ಹೋರಾಟದ ಫಲವಾಗಿ ನೀರಾವರಿ ಯೋಜನೆ ಅನುಷ್ಠಾನಗೊಂಡಿದೆ. 88 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆದಿದ್ದು, ಈಗಾಗಲೇ ಶೇ. 90ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ ಶೇ. 10ರಷ್ಟು ಸಣ್ಣಪುಟ್ಟ ಕಾಮಗಾರಿ ನಡೆಯಬೇಕಿದ್ದು, ಕೆಲ ದಿನಗಳಲ್ಲೇ ಪೂರ್ಣಗೊಳ್ಳಲಿದೆ ಎಂದರು.

ಶೀಘ್ರ ಬರಲಿದೆ ಪರಿಹಾರ: ಈ ಏತ ನೀರಾವರಿ ಯೋಜನೆಯಿಂದ 0.50 ಟಿಎಂಸಿ ಅಡಿ ನೀರಿನಲ್ಲಿ 6ರಿಂದ 8 ಸಾವಿರ ಎಕರೆ ಪ್ರದೇಶದಲ್ಲಿ ನೀರಾವರಿ ಸೌಲಭ್ಯ ದೊರೆಯಲಿದೆ. 6ಕ್ಕೂ ಹೆಚ್ಚು ಹಳ್ಳಿಗಳ ರೈತರ ಜಮೀನುಗಳಿಗೆ ನೀರು ಹರಿಯಲಿದೆ. ಇದರಿಂದ ರೈತರಿಗೆ ತುಂಬ ಅನುಕೂಲವಾಗಿದೆ. ಈ ಯೋಜನೆಯನ್ನು ರೈತರಿಗಾಗಿಯೇ ಆರಂಭಿಸಿದ್ದೇವೆ. ಕೆಲವೊಂದು ಸಣ್ಣಪುಟ್ಟ ಸಮಸ್ಯೆಗಳು ಇರುತ್ತವೆ ಎಂದರು.

ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಭೂ ಸ್ವಾಧಿಧೀನ ಪ್ರಕ್ರಿಯೆ ನಡೆಯಬೇಕಿದೆ. ಜಿಲ್ಲಾಧಿಕಾರಿ ಆ ಕೆಲಸ ಮಾಡಬೇಕಿದೆ. ನಾನು ಮಾಡಲು ಬರುವುದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಹೆಚ್ಚಿನ ಕಾಳಜಿ ವಹಿಸಬೇಕು. ರೈತರಿಗೆ ಬರಬೇಕಾದ ಭೂ ಸ್ವಾಧೀನದ ಪರಿಹಾರ ಖಂಡಿತ ಅವರಿಗೆ ಬರಲಿದೆ ಎಂದರು.

ರೈತರ ಜೊತೆ ಚರ್ಚೆ ನಡೆಸುವೆ: ಈ ನೀರಾವರಿ ಯೋಜನೆಯಡಿ ವಿದ್ಯುತ್‌ ಲೈನ್‌ ಅಳವಡಿಕೆ ಮಾಡುವ ಕಾರ್ಯವೊಂದೇ ಬಾಕಿ ಇದೆ. ಆದರೆ ಈ ಭಾಗದಲ್ಲಿ ಕೆಲವೊಂದು ರೈತರು ನಮ್ಮ ಜಮೀನಿನ ಮಧ್ಯೆದಲ್ಲಿ ವಿದ್ಯುತ್‌ ಲೈನ್‌ ಅಳವಡಿಕೆ ಮಾಡಬೇಡಿ ಎಂದು ಅಧಿಕಾರಿಗಳಿಗೆ ಹೇಳುತ್ತಿದ್ದಾರೆ ಎನ್ನುವ ಮಾಹಿತಿ ದೊರೆತಿದೆ. ಈ ಬಗ್ಗೆ ಅವರೊಂದಿಗೆ ಶೀಘ್ರ ಸಭೆ ನಡೆಸಿ ಎಲ್ಲ ಸಮಸ್ಯೆಗಳನ್ನೂ ಬಗೆ ಹರಿಸುವೆ ಎಂದರು.

Advertisement

ರಾಜಶೇಖರ ಹಿಟ್ನಾಳ, ಎಸ್‌.ಬಿ. ನಾಗರಡ್ಡಿ, ವೆಂಕನಗೌಡ ಹಿರೇಗೌಡ್ರ, ರವಿ ಕುರಗೋಡ ಯಾದವ್‌ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ವಿವಿಧೆಡೆ ಕಾಮಗಾರಿ ಪರಿಶೀಲನೆ:

ತುಂಗಭದ್ರಾ ಹಿನ್ನೀರು ಪ್ರದೇಶದ ಹನುಕುಂಟಿ ಗ್ರಾಮದ ಸಮೀಪದಲ್ಲಿ ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯ ಕಾಮಗಾರಿ ಪ್ರಗತಿಯನ್ನು ಶಾಸಕ ರಾಘವೇಂದ್ರ ಹಿಟ್ನಾಳ ಪರಿಶೀಲನೆ ನಡೆಸಿದರು. ಮುಖ್ಯ ಕಾಲುವೆ, ಪಂಪ್‌ಹೌಸ್‌, ಮೋಟರ್‌ ಸೇರಿದಂತೆ ಇತರೆ ಕಾರ್ಯ ಪರಿಶೀಲನೆ ನಡೆಸಿ, ರೈತರ ಜೊತೆಗೆ ಸಮಾಲೋಚನೆ ನಡೆಸಿದರು.
Advertisement

Udayavani is now on Telegram. Click here to join our channel and stay updated with the latest news.

Next