ವಿಧಾನಪರಿಷತ್ತು: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರಡಿ ಭೂಸ್ವಾಧೀನಕ್ಕೆ ಒಳಪಡುವ ಜಮೀನುಗಳ ಪರಿಹಾರಕ್ಕೆ ಏಕರೂಪ ದರ ನಿಗದಿಪಡಿಸಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಕೆ.ಎ ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಜಲಸಂಪನ್ಮೂಲ ಸಚಿವರ ಪರವಾಗಿ ಉತ್ತರಿಸಿದ ಮಾಧುಸ್ವಾಮಿ, ಯೋಜನೆಯಡಿ ಜಮೀನು ಕಳೆದುಕೊಂಡವರಿಗೆ ಪರಿಹಾರ ನೀಡಲು ಏಕರೂಪ ದರ ನಿಗದಿಪಡಿಸಬೇಕು ಎಂಬ ಬೇಡಿಕೆ ಹಿನ್ನೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರಡಿ ಭೂಸ್ವಾಧೀನಕ್ಕೆ ಒಳಪಡುವ ಜಮೀನುಗಳಿಗೆ ಖುಷ್ಕಿ ಜಮೀನಿಗೆ ಪ್ರತಿ ಎಕರೆಗೆ 5 ಲಕ್ಷ 4 ಪಟ್ಟು ಸೇರಿ 20 ಲಕ್ಷ. ನೀರಾವರಿ ಹಾಗೂ ಬಾಗಾಯತ್ ಜಮೀನಿಗೆ ಪ್ರತಿ ಎಕರೆಗೆ 6 ಲಕ್ಷದಂತೆ 4 ಪಟ್ಟು ಸೇರಿಸಿ 24 ಲಕ್ಷ ರೂ.ಗಳಂತೆ ಏಕರೂಪ ದರ ನಿಗದಿಪಡಿಸಿ ಒಪ್ಪಂದದ ಐತೀರ್ಪು ರಚಿಸಲು ಆದೇಶ ಹೊರಡಿಸಲಾಗಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಯುಕೆಪಿ-3 ಯೋಜನೆಯಡಿ 20 ಗ್ರಾಮಗಳು ಮುಳುಗಡೆ ಆಗುತ್ತಿದ್ದು, ಈ ಪೈಕಿ 8 ಗ್ರಾಮಗಳಿಗೆ 9 ಪುನರ್‌ವಸತಿ ಕೇಂದ್ರಗಳನ್ನು ಗುರುತಿಸಿ ಲೇಔಟ್ ನಕ್ಷೆ ಹಾಗೂ ಮೂಲಭೂತ ಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಬಾಕಿ ಇರುವ 12 ಗ್ರಾಮಗಳಿಗೆ ಪುನರ್‌ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮೂರನೇ ಹಂತಕ್ಕೆ 1.33 ಲಕ್ಷ ಎಕರೆ ಭೂಸ್ವಾಧೀನಪಡಿಸಿಕೊಳ್ಳಬೇಕಾಗಿದೆ. ಈ ಪೈಕಿ ಇದುವರೆಗೆ 26,173 ಎಕರೆ ಭೂಸ್ವಾಧೀನಕ್ಕೆ ಐತೀರ್ಪು ಮಾಡಲಾಗಿದೆ. 44,928 ಎಕರೆ ಸ್ವಾಧೀನ ಪ್ರಕ್ರಿಯೆ ವಿವಿಧ ಹಂತದಲ್ಲಿ. 12,373 ಎಕರೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.
ಯೋಜನೆಯ ಪರಿಷ್ಕೃತ ಅಂದಾಜು ವೆಚ್ಚ 51,148.94 ಕೋಟಿ ರೂ. ಆಗಿದ್ದು, ಈ ಪೈಕಿ ಭೂಸ್ವಾಧೀನಕ್ಕೆ 17,627 ಕೋಟಿ ರೂ. ಮೊತ್ತವನ್ನು ಮೀಸಲಿಡಲಾಗಿದೆ. ಇಲ್ಲಿವರೆಗೆ ಭೂಸ್ವಾಧೀನಕ್ಕೆ 2,598.91 ಕೋಟಿ ಹಾಗೂ ಮುಳುಗಡೆ ಹೊಂದುವ 20 ಗ್ರಾಮಗಳ ಮತ್ತು ಬಾಗಲಕೋಟೆ ಪಟ್ಟಣದಲ್ಲಿ ಪುನರ್‌ವಸತಿ ಮತ್ತು ಪುನರ್ ನಿರ್ಮಾಣಕ್ಕೆ 1,209 ಕೋಟಿ ಸೇರಿ ಒಟ್ಟಾರೆ 3,808.21 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ನ್ಯಾಯಾಧೀಕರಣದಿಂದ ಅಂತಿಮ ಅಧಿಸೂಚನೆ ಆಗುವ ತನಕ ಇಂತಿಷ್ಟೇ ದಿನಗಳಲ್ಲಿ ಯೋಜನೆ ಆಗಲಿದೆ ಎಂದು ನಿರ್ದಿಷ್ಟವಾಗಿ ಹೇಳಲು ಆಗುವುದಿಲ್ಲ. ಹಂತ-ಹಂತವಾಗಿ ಸರ್ಕಾರ ಮುಂದುವರಿಯಬೇಕಾಗುತ್ತದೆ. ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಅನುಷ್ಠಾನ ನಮ್ಮ ಸರ್ಕಾರದ ಆದ್ಯತೆಯಾಗಿದ್ದು, ಅಂತಿಮ ಅಧಿಸೂಚನೆ ಸಂಬಂಧ ಕಾನೂನು ಇಲಾಖೆಯೊಂದಿಗೆ ಚರ್ಚಿಸಲಾಗುವುದು ಎಂದು ಸಚಿವ ಮಾಧುಸ್ವಾಮಿ ಇದೇ ವೇಳೆ ಹೇಳಿದರು.