ವಿಧಾನಸಭೆ: ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ವಿವಿಧ ಕಾಮಗಾರಿಗಳ ಭೂಸ್ವಾಧೀನ ಹಾಗೂ ಪರಿಹಾರ ನಿಗದಿ ವಿಚಾರದಲ್ಲಿ ಭಾರಿ ಅವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಕಟಿಸಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನೆಗೆ ಉತ್ತರಿಸಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಇಲ್ಲಿ ನಡೆದಿರುವ ಕೆಲ ಸಂಗತಿಗಳನ್ನು ಗಮನಿಸಿದರೆ ನೀವೆಲ್ಲರೂ ಗಾಭರಿಯಾಗಬೇಕಾಗುತ್ತದೆ. ಈ ಯೋಜನೆ ಅನುಷ್ಠಾನ ಸಂದರ್ಭದಲ್ಲಿ ರೈತರು ಎಕರೆಗೆ 1 ರಿಂದ 3 ಸಾವಿರ ರೂ.ವರೆಗೆ ಮಾತ್ರ ಪರಿಹಾರ ಪಡೆದಿದ್ದರು. ಆದರೆ ಈಗ ಪರಿಹಾರ ಮತ್ತು ಭೂಸ್ವಾಧೀನ ವಿಚಾರವೇ ಹಗರಣದ ಸ್ವರೂಪ ಪಡೆದಿದ್ದು, ಈ ಬಗ್ಗೆ ತನಿಖೆ ನಡೆಸಬೇಕಾದ ಸಂದರ್ಭ ಬಂದಿದೆ ಎಂದರು.
ಒಟ್ಟು 2000 ಪ್ರಕರಣಗಳಲ್ಲಿ ನಾವು ಪರಿಹಾರ ಕೊಡಬೇಕಿದೆ. ಹಿಂದೆ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಸರಾಸರಿ 25 ಲಕ್ಷ ರೂ. ಪ್ರತಿ ಎಕರೆಗೆ ಪರಿಹಾರ ನಿಗದಿ ಮಾಡಲಾಗಿತ್ತು. ಆದರೆ ವಿಜಯಪುರದ ಒಂದು ಪ್ರಕಣದಲ್ಲಿ ಒಂದು ಎಕರೆಗೆ 5.18 ಕೋಟಿ ರೂ. ಪರಿಹಾರ ನೀಡುವಂತೆ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲೂ ಇಷ್ಟು ಪರಿಹಾರ ನೀಡುವುದಕ್ಕೆ ಸಾಧ್ಯವಿಲ್ಲ. ಸರ್ಕಾರಿ ವಕೀಲರು ಹಾಗೂ ಕಕ್ಷಿದಾರರ ಭಾಗಿದಾರಿಕೆಯಿಂದ ಇಂಥ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಂಥ ಪ್ರಕರಣದಲ್ಲಿ ಭಾಗಿಯಾದ ಎಲ್ಲ ವಕೀಲರನ್ನು ಕಿತ್ತು ಹಾಕುವುದಕ್ಕೆ ಕಾನೂನು ಮತ್ತು ಸಂಸದೀಯ ಇಲಾಖೆ ಜತೆ ಸಭೆ ನಡೆಸಿ ಸಮಗ್ರ ತನಿಖೆ ನಡೆಸಲಾಗುವುದು ಎಂದು ಹೇಳಿದರು.
ಇದಕ್ಕೂ ಮೊದಲು ಮಾತನಾಡಿದ ಬಸನಗೌಡ ಯತ್ನಾಳ್, ಕೃಷ್ಣಾ ನದಿ ಕರ್ನಾಟಕದ ಶೇ.68 ರಷ್ಟು ನೀರಾವರಿ ಯೋಜನೆಗಳಿಗೆ ಆಧಾರವಾಗಿದೆ. ಆದರೆ, ಕಾವೇರಿ ಕೊಳ್ಳದ ಯೋಜನೆಗಳಿಗೆ ಸಿಕ್ಕ ಆದ್ಯತೆ ಲಭ್ಯವಾಗುತ್ತಿಲ್ಲ. ಇದೇ ರೀತಿಯಾದರೆ 100 ವರ್ಷವಾದರೂ ಕಾಮಗಾರಿಗಳು ಮುಕ್ತಾಯವಾಗುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.