ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ಖಾಲಿ ಉಳಿದಿರುವ ಆರು ಸ್ಥಾನಗಳಿಗೆ ಪ್ರವೇಶ ಪಡೆಯಲು ಕಾಂಗ್ರೆಸ್‌ನಲ್ಲಿ ಸಾಕಷ್ಟು ಪೈಪೋಟಿ ಆರಂಭವಾಗಿದೆ.
ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಮೂವರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೂವರು ಗಣ್ಯರನ್ನು ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಲು ಅವಕಾಶವಿದೆ.ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಆಯ್ಕೆಯಾಗುವ ಮೂರು ಸ್ಥಾನಗಳಲ್ಲಿ ಒಂದು ಹಾಗೂ ಸರ್ಕಾರದಿಂದ ನಾಮನಿರ್ದೇಶನ ಮಾಡುವ ಮೂರು ಸ್ಥಾನಗಳಲ್ಲಿ ಎರಡು ಸ್ಥಾನ ಕಾಂಗ್ರೆಸ್‌ಗೆ ಲಭಿಸಲಿದೆ.
ವಿಧಾನಸಭೆಯಿಂದ ಪರಿಷತ್‌ಗೆ ಆಯ್ಕೆಯಾಗುವ ಸ್ಥಾನಕ್ಕಾಗಿ ಸಾಕಷ್ಟು ಹಿರಿಯ ನಾಯಕರು ಪೈಪೋಟಿ ಆರಂಭಿಸಿದ್ದು ಮಾಜಿ ಸಚಿವರಾದ ರಾಣಿ ಸತೀಶ್, ಪ್ರೊ.ಬಿ.ಕೆ. ಚಂದ್ರಶೇಖರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಮಾಜಿ ಮೇಯರ್ ರಾಮಚಂದ್ರಪ್ಪ ಅವರು ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸರ್ಕಾರದಿಂದ ನಾಮನಿರ್ದೇಶನಗೊಳ್ಳುವ ಎರಡು ಸ್ಥಾನಗಳಿಗೆ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಅವರ ಜೊತೆಗೆ ಕೆಪಿಸಿಸಿ ಉಪಾಧ್ಯಕ್ಷ ಪ್ರೊ. ಕೆ.ಇ. ರಾಧಾಕೃಷ್ಣ ಸೇರಿದಂತೆ ಹಲವರ ಹೆಸರು ಕೇಳಿಬರುತ್ತಿದೆ.
ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾದ ಜೆಡಿಎಸ್‌ಗೂ ಎರಡು ಸ್ಥಾನ ಸಿಗಲಿದ್ದ, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿರುವ ವೈ.ಎಸ್.ವಿ.ದತ್ತಾ, ಮಧು ಬಂಗಾರಪ್ಪ, ಸುರೇಶ್‌ಬಾಬು, ಕೋನರೆಡ್ಡಿ , ಪ್ರೊ.ಕೆ.ಎಸ್.ರಂಗಪ್ಪ ಹಾಗೂ ಪಕ್ಷದ ಮುಖಂಡ ಜಫ್ತುಲ್ಲಾ ಖಾನ್ ಆಕಾಂಕ್ಷಿಗಳಾಗಿದ್ದಾರೆ ಎನ್ನಲಾಗಿದೆ. ಬಿಜೆಪಿಗೆ ಒಂದು ಸ್ಥಾನ ಸಿಗಲಿದ್ದು ಡಿ.ಎಸ್.ವೀರಯ್ಯ, ಬಿ.ಜೆ.ಪುಟ್ಟಸ್ವಾಮಿ ಸೇರಿ ಹಲವು ಆಕಾಂಕ್ಷಿಗಳಾಗಿದ್ದಾರೆ.
ನಾಮನಿರ್ದೇಶನಗೊಂಡಿದ್ದ ತಾರಾ ಅನುರಾಧಾ, ಎಂ.ಡಿ. ಲಕ್ಷ್ಮೀನಾರಾಯಣ್ ಹಾಗೂ ಕೆ.ಬಿ. ಶಾಣಪ್ಪ ಆಗಸ್ಟ್ 9 ರಂದು ನಿವೃತ್ತರಾಗಿದ್ದರು.ವಿಧಾನ ಪರಿಷತ್ ಸದಸ್ಯರಾಗಿದ್ದ ಕೆ.ಎಸ್.ಈಶ್ವರಪ್ಪ, ವಿ. ಸೋಮಣ್ಣ ಹಾಗೂ ಬೈರತಿ ಸುರೇಶ್ ಅವರು ವಿಧಾನಸಭೆಗೆ ಆಯ್ಕೆಯಾಗಿದ್ದರಿಂದ ಮೂರು ಸ್ಥಾನಗಳು ಖಾಲಿಯಾಗಿವೆ. ಇದರ ಜತೆಗೆ ಸ್ಥಳೀಯ ಸಂಸ್ಥೆಯಿಂದ ಚುನಾಯಿತರಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರಿಂದ ತೆರವಾದ ಸ್ಥಾನಕ್ಕೆ ಈಗಾಗಲೇ ಚುನಾವಣೆ ದಿನಾಂಕ ನಿಗದಿಯಾಗಿದೆ.