ಬೆಂಗಳೂರು: ಮೇಲ್ಮನೆ ಅಭ್ಯರ್ಥಿಗಳ ಆಯ್ಕೆಗಾಗಿ ರಾಜ್ಯ ಕಾಂಗ್ರೆಸ್ ದಿಲ್ಲಿಯಲ್ಲಿ ಕಸರತ್ತು ಆರಂಭಿಸಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮಂಗಳವಾರ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.
ಬುಧವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತಿತರ ಮುಖಂಡರು ಏಳು ಅಭ್ಯರ್ಥಿಗಳ ಪಟ್ಟಿಗೆ ಅಂತಿಮ ಮುದ್ರೆ ಒತ್ತುವ ಸಾಧ್ಯತೆಗಳಿವೆ.
ಪ್ರಾದೇಶಿಕತೆ ಹಾಗೂ ಜಾತಿವಾರು ಆಗಿ ಸಿದ್ಧಪಡಿಸಿಕೊಂಡು ಹೋಗಿದ್ದ ಪಟ್ಟಿಯನ್ನು ಸುಜೇìವಾಲ ಹಾಗೂ ವೇಣುಗೋಪಾಲ್ ಮುಂದಿಟ್ಟು ಚರ್ಚಿಸಿರುವ ಸಿಎಂ, ಡಿಸಿಎಂ ತಮ್ಮ ಅತ್ಯಾಪ್ತರ ಪರವಾಗಿಯೂ ಬೇಡಿಕೆ ಮಂಡಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ದಿಲ್ಲಿಗೆ ಪ್ರಯಾಣ ಬೆಳೆಸಿದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರು ಎಐಸಿಸಿ ಪ್ರ.ಕಾರ್ಯದರ್ಶಿಗಳ ಜತೆ ಮಾತುಕತೆ ಮುಗಿಸಿದ್ದಾರೆ. ಹರಿಯಾಣ ಪ್ರವಾಸದಲ್ಲಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಮಿಸುವುದು ವಿಳಂಬವಾದದ್ದರಿಂದ ಅವರ ಭೇಟಿ ಸಾಧ್ಯವಾಗಲಿಲ್ಲ. ಹೀಗಾಗಿ ಖರ್ಗೆ ಜತೆ ಬುಧವಾರ ಮಹತ್ವದ ಹಾಗೂ ಅಂತಿಮ ಸುತ್ತಿನ ಸಭೆ ನಡೆಯಲಿದೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ವರುಣಾ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವ ಪುತ್ರ ಯತೀಂದ್ರ ಅವರಿಗೆ ಮೇಲ್ಮನೆ ಸದಸ್ಯತ್ವ ನೀಡಬೇಕೆಂದು ಸಿಎಂ ಸಿದ್ದರಾಮಯ್ಯ ಒತ್ತಡ ಹಾಕುತ್ತಿದ್ದಾರೆ. ಮೇಲ್ಮನೆಯಲ್ಲಿ ಅನುಭವಿಗಳು ಇರುವುದು ಮುಖ್ಯ, ಹೀಗಾಗಿ ರಮೇಶ್ ಕುಮಾರ್ ಅವರಿಗೆ ಟಿಕೆಟ್ ನೀಡಬೇಕೆಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆಗ್ರಹಿಸುತ್ತಿದ್ದಾರೆ. ಸುಜೇìವಾಲಾ ಜತೆಗೆ ಪ್ರತ್ಯೇಕವಾಗಿ ಚರ್ಚಿಸಿದ ಡಿಸಿಎಂ, ಮೇಲ್ಮನೆಯಲ್ಲಿ ರಮೇಶ್ ಕುಮಾರ್ ಅವರ ಅನಿವಾರ್ಯವನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದು, ಮುಂದೆ ಮೇಲ್ಮನೆಯಲ್ಲಿ ಸಭಾಪತಿ ಸ್ಥಾನವನ್ನು ನೀಡಿದರೆ ಹೆಚ್ಚಿನ ಅನುಕೂಲ ಆಗಲಿದೆ ಎಂಬುದನ್ನು ಅರ್ಥ ಮಾಡಿಸಲು ಯತ್ನಿಸಿದರು.
ಸಚಿವ ಬೋಸರಾಜ್ ಮುಂದುವರಿಕೆ ಸಾಧ್ಯತೆ
ಪ್ರಸ್ತುತ ಮೇಲ್ಮನೆಯಲ್ಲಿ ಸಭಾನಾಯಕರಾಗಿರುವ ಸಚಿವ ಬೋಸರಾಜ್ ಅವರನ್ನು ಮುಂದುವರಿಸುವ ಸಾಧ್ಯತೆಗಳಿದ್ದು, ಕೆ. ಗೋವಿಂದರಾಜು ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಸಚಿವ ಸಂಪುಟ ದರ್ಜೆಯಲ್ಲಿ ಮುಂದುವರಿಸಿ, ಮೇಲ್ಮನೆಯಲ್ಲಿ ಅವರ ಸ್ಥಾನಕ್ಕೆ ಒಕ್ಕಲಿಗ ಕೋಟಾದಡಿ ಮತ್ತೂಬ್ಬರಿಗೆ ಅವಕಾಶ ನೀಡುವ ಚಿಂತನೆಗಳು ನಡೆದಿವೆ. ಪಕ್ಷದಲ್ಲಿ ಹಿರಿಯರಾದ ಬಿ.ಎಲ್. ಶಂಕರ್, ವಿನಯ್ ಕಾರ್ತಿಕ್, ವಿ.ಆರ್. ಸುದರ್ಶನ್, ಬಿ.ವಿ. ಶ್ರೀನಿವಾಸ್, ಪುಷ್ಪಾ ಅಮರನಾಥ್, ಮಂಜುಳಾ ನಾಯ್ಡು, ಸಚಿನ್ ಮೀಗಾ ಸಹಿತ ಹಲವರ ಹೆಸರು ಕೇಳಿ ಬರುತ್ತಿವೆ.
ಪರಿಷತ್ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಸಿಎಂ, ಡಿಸಿಎಂ ಇಬ್ಬರೇ ನಿರ್ಧಾರ ಕೈಗೊಳ್ಳ ಬಾರದು. ನಮ್ಮೆಲ್ಲ ಹಿರಿ ಯರ, ಅನುಭವಿಗಳ ಸಲಹೆ- ಸೂಚನೆ ಪಡೆಯುವುದು ಸೂಕ್ತ.
– ಡಾ| ಪರಮೇಶ್ವರ, ಗೃಹ ಸಚಿವ
ಇರುವುದು ಏಳೇ ಸ್ಥಾನ. 300ಕ್ಕೂ ಹೆಚ್ಚು ಆಕಾಂಕ್ಷಿ ಗಳಿದ್ದಾರೆ. ಎಲ್ಲರಿಗೂ ಕೊಡ ಲಾಗುವು ದಿಲ್ಲ. ಕಷ್ಟಕರ ಸ್ಥಿತಿ ಇದೆ. ನೋಡೋಣ. ಖಂಡಿತ ಪರಮೇಶ್ವರ ಅವರ ಮಾತು ಕೇಳಿಯೇ ಕೇಳುತ್ತೇವೆ.
– ಡಿ.ಕೆ. ಶಿವಕುಮಾರ್, ಡಿಸಿಎಂ