Advertisement

ಲೋಕಸಭಾ ಚುನಾವಣೆಗೆ ಸಜ್ಜಾದ ಯುಪಿಪಿ

12:30 AM Jan 27, 2019 | Team Udayavani |

ಬೆಂಗಳೂರು: ‘ಮುಂಬರುವ ಲೋಕಸಭಾ ಚುನಾವಣೆಗೆ ಉತ್ತಮ ಪ್ರಜಾಕೀಯ ಪಕ್ಷ (ಯುಪಿಪಿ) ಸಜ್ಜಾಗಿದ್ದು, ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದೆ’ ಎಂದು ಚಿತ್ರ ನಟ ಹಾಗೂ ಉತ್ತಮ ಪ್ರಜಾಕೀಯ ಪಕ್ಷದ ರಾಜ್ಯಾಧ್ಯಕ್ಷ ಉಪೇಂದ್ರ ಹೇಳಿದ್ದಾರೆ.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಮಾಹಿತಿ ನೀಡಿದರು.’ಪಕ್ಷದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಸಾಗಿದು,್ದ ಮುಂದಿನ ಹದಿನೈದು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ’ ಎಂದು ತಿಳಿಸಿದರು.

‘ಪ್ರಜಾಪ್ರಭುತ್ವದಲ್ಲಿ ಜನರೇ ಸ್ಟಾರ್‌. ಹೀಗಾಗಿ ಸ್ಟಾರ್‌ ನಟ-ನಟಿಯರು ಪ್ರಚಾರದಲ್ಲಿ ಪಾಲ್ಗೊಂಡ ತಕ್ಷಣ ಮತದಾರರು ಮರುಳಾಗುತ್ತಾರೆ ಎಂಬುದು ತಪ್ಪು ಕಲ್ಪನೆ. ಉತ್ತಮ ಪ್ರಜಾಕೀಯ ಪಕ್ಷ ಸ್ಟಾರ್‌ ಪ್ರಚಾರದ ಸಂಬಂಧ ಇದುವರೆಗೂ ಯಾರನ್ನೂ ಭೇಟಿ ಮಾಡಿ, ಮಾತುಕತೆ ನಡೆಸಿಲ್ಲ’ ಎಂದರು.

ಪ್ರಜೆಗಳಿಗೆ ಅಧಿಕಾರ ವರ್ಗಾವಣೆ: ‘ಉತ್ತಮ ಪ್ರಜಾಕೀಯ ಪಕ್ಷ ಸಂಪೂರ್ಣ ಅಧಿಕಾರವನ್ನು ಪ್ರಜೆಗಳಿಗೆ ವರ್ಗಾಯಿಸಿದೆ. ಪಕ್ಷದ ಅಭ್ಯರ್ಥಿಗಳ ಆಯ್ಕೆ ಕೂಡ ಭಿನ್ನರೀತಿಯಲ್ಲೇ ನಡೆಯಲಿದ್ದು, ಪಕ್ಷದಿಂದ ಸ್ಪರ್ಧೆ ಬಯಸುವ ಅಭ್ಯರ್ಥಿಗಳೇ ಮೊದಲು ಚುನಾವಣಾ ಪ್ರಣಾಳಿಕೆಯನ್ನು ಸಿದ್ಧಪಡಿಸಲಿದ್ದಾರೆ’ ಎಂದು ಹೇಳಿದರು.

ಮಹಿಳೆಯರಿಗೂ ಆದ್ಯತೆ: ‘ಪಕ್ಷದಲ್ಲಿ ಮಹಿಳೆಯರಿಗೂ ಹೆಚ್ಚಿನ ಆದ್ಯತೆ ನೀಡಲಾಗುವುದು. ಮಹಿಳೆಯರು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದೆ ಬಂದರೆ ಅವರಿಗೂ ಕೂಡ ಅವಕಾಶ ನೀಡಲಾಗುವುದು. ಆದರೆ, ಯಾವುದೇ ಅಭ್ಯರ್ಥಿ ಆಗಿರಲಿ ಅವರು ಯಪಿಪಿ ಪಕ್ಷದ ನೀಡುವ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಮಾತ್ರ ಕಣಕ್ಕಿಳಿಯಲು ಅವಕಾಶ ನೀಡಲಾಗುವುದು’ ಎಂದು ಸ್ಪಷ್ಟಪಡಿಸಿದರು.

Advertisement

ಚುನಾವಣೆ ವೇಳೆ ವಿಭಿನ್ನವಾದ ರೀತಿಯಲ್ಲಿ ಪ್ರಚಾರ ನಡೆಯಲಿದ್ದು ಪ್ರಚಾರ ಸಭೆಗಳಲ್ಲಿ ಯಾವ ಪಕ್ಷಗಳ ವಿರುದ್ಧವೂ ಟೀಕೆ ಮಾಡುವುದಿಲ್ಲ. ನಮ್ಮ ಪಕ್ಷ ಗೆದ್ದು ಬಂದರೆ ಯಾವ, ಯಾವ ಕೆಲಸವನ್ನು ಮಾಡುತ್ತೇವೆ ಎಂಬುದನ್ನು ಜನರಿಗೆ ತಿಳಿಸುತ್ತೇವೆ. ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಂಡು ಮತದಾರರನ್ನು ನೇರವಾಗಿ ತಲುಪುವ ಪ್ರಯತ್ನ ಮಾಡುವುದಾಗಿ ನುಡಿದರು.

ಸ್ಪರ್ಧೆ ಕುರಿತು ಇನ್ನೂ ನಿರ್ಧಾರ ಮಾಡಿಲ್ಲ
‘ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ನಾನು ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ಸುಮಾರು 18 ರಿಂದ 20 ಅಭ್ಯರ್ಥಿಗಳು ಯುಪಿಪಿ ಪಕ್ಷದಿಂದ ಕಣಕ್ಕಿಳಿಯ ಬಯಸಿದ್ದು, ಕೆಲವೇ ದಿನಗಳಲ್ಲಿ ಈ ಬಗ್ಗೆ ಚಿತ್ರಣ ಸಿಗಲಿದೆ. ಚುನಾವಣೆಯಲ್ಲಿ ನಾನು ಸ್ಪರ್ಧಿಸಲೂಬಹುದು, ಸ್ಪರ್ಧಿಸದೇ ಇದ್ದರೂ ಇರಬಹುದು ಕಾದು ನೋಡಿ’ ಎಂದು ಉಪೇಂದ್ರ ಹೇಳಿದರು.

ಸಿದ್ದಗಂಗಾ ಶ್ರೀಗಳು ವಿಶ್ವರತ್ನ. ಭಕ್ತರು ಅವರನ್ನು ನಡೆದಾಡುವ ದೇವರು ಎಂದು ಕರೆಯುತ್ತಾರೆ. ದೇವರಿಗೇ ಯಾರಾದರೂ ಭಾರತ ರತ್ನ ನೀಡುತ್ತಾರೆಯೇ?
– ಉಪೇಂದ್ರ, ನಟ.

Advertisement

Udayavani is now on Telegram. Click here to join our channel and stay updated with the latest news.

Next