ಚಳ್ಳಕೆರೆ: ಕಳೆದ ಹಲವಾರು ವರ್ಷಗಳಿಂದ ರಾಜಕೀಯ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಉಪ್ಪಾರ ಸಮುದಾಯ ಹಿನ್ನಡೆ ಅನುಭವಿಸಲು ಸೂಕ್ತ ಶಿಕ್ಷಣ ಪಡೆಯದಿರುವುದೇ ಪ್ರಮುಖ ಕಾರಣ. ಉಪ್ಪಾರ ಸಮಾಜ ಸಂಘಟಿತರಾಗಿ ಹೋರಾಟ ನಡೆಸಿದಲ್ಲಿ ಎಲ್ಲಾ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ. ಸಂಘಟನೆಗೆ ಒತ್ತು ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕೆಂದು ತಾಲೂಕು ಉಪ್ಪಾರ ಸಂಘ ಗೌರವಾಧ್ಯಕ್ಷ ಎಸ್. ಯಲ್ಲಪ್ಪ ತಿಳಿಸಿದರು.
ಅವರು ಇಲ್ಲಿನ ಉಪ್ಪಾರ ವಿದ್ಯಾರ್ಥಿನಿಲಯದಲ್ಲಿ ಆಯೋಜಿಸಿದ್ದ ಸಾಧಕರಿಗೆ ಸನ್ಮಾನ ಮತ್ತು ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಪ್ಪಾರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿನಿ ಸ್ವಂದನ, ಪೊಲೀಸ್ ಇಲಾಖೆಯ ದಕ್ಷತೆ ಸೇವೆಗಾಗಿ ಮುಖ್ಯಮಂತ್ರಿ ಪದಕ ಪಡೆದ ಠಾಣಾ ಇನ್ಸ್‌ಪೆಕ್ಟರ್ ಜೆ.ಎಸ್. ತಿಪ್ಪೇಸ್ವಾಮಿ ಕಾರ್ಯವನ್ನು ಶ್ಲಾಘೀಸಿದರು. ಸಮಾಜದ ನಿವೃತ್ತ ಶಿಕ್ಷಕ ಚಂದ್ರಣ್ಣ, ಶಿವಣ್ಣ, ಎಎಸ್‌ಐ ಪ್ರಭುಲಿಂಗರ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿದ ಇನ್ಸ್‌ಪೆಕ್ಟರ್ ಜೆ.ಎಸ್. ತಿಪ್ಪೇಸ್ವಾಮಿ ಮಾತನಾಡಿ, ಕಳೆದ ಸಾಲಿನ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ಪದಕ ನೀಡಿ ಗೌರವಿಸಿದೆ. ಉಪ್ಪಾರ ಸಮುದಾಯ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ ಎಂದರು.
ಎಲ್‌ಐಸಿ ದುಗ್ಗಾವರ ರಂಗಸ್ವಾಮಿ ಮಾತನಾಡಿ, ಸಮುದಾಯದಲ್ಲಿ ಸಂಘಟನೆ ಕೊರತೆ ಎದುರಾದಾಗ ಮಾತ್ರ ಸಮಸ್ಯೆಗಳು ಎದುರಾಗುವವು. ಸಮಾಜದ ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಕ್ರಿಯಾಶೀಲವಾಗಿ ಸಮುದಾಯದ ಸಂಘಟನೆಗೆ ತೊಡಗಬೇಕು. ಎಲ್ಲಾ ಕ್ಷೇತ್ರಗಳಲ್ಲೂ ಪ್ರಾತಿನಿಧ್ಯ ಪಡೆಯುವ ನಿಟ್ಟಿನಲ್ಲಿ ಹೋರಾಟ ಕೈಗೊಳ್ಳಬೇಕು ಎಂದರು.
ಉಪ್ಪಾರ ಸಂಘದ ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷ ಗುರುಲಿಂಗಪ್ಪ, ಶಿವಮೂರ್ತಿ, ಮಂಜುನಾಥ, ಎಚ್.ರಂಗನಾಥ, ಎಸ್.ಟಿ. ತಿಪ್ಪೇಸ್ವಾಮಿ, ಡಿಎಂಕೆ ರವಿ, ವಕೀಲ ನಾಗರಾಜು, ವೆಂಕಟೇಶ್, ಮುಸ್ಟೂರು ಲಿಂಗಪ್ಪ, ಪತ್ರಕರ್ತ ಗೋಪನಹಳ್ಳಿ ಶಿವಣ್ಣ ಮುಂತಾದವರು ಉಪಸ್ಥಿತರಿದ್ದರು.