ಹೊಸದಿಲ್ಲಿ: ಆನ್‌ಲೈನ್ ಪಾವತಿಗಳಲ್ಲಿನ ವಂಚನೆ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ ಅಂತಹ ವಂಚನೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರಕಾರ ಹೊಸ ನೀತಿಯನ್ನು ಪರಿಚಯಿಸಲು ಚಿಂತನೆ ನಡೆಸುತ್ತಿದೆ. ಆ ಪ್ರಕಾರ ಮೊದಲಬಾರಿಗೆ ಇನ್ನೊಬ್ಬರಿಗೆ 2,000 ರೂ.ಗಳಿಗಿಂತ ಹೆಚ್ಚಿನ ಹಣವನ್ನು ಪಾವತಿಸಬೇಕಾದರೆ 4 ಗಂಟೆಗಳವರೆಗೆ ಕಾಯಬೇಕಾಗುತ್ತದೆ! ಈ ವಿಳಂಬ ನೀತಿಯ ಮೂಲಕ ವಂಚನೆ ತಡೆಯಬಹುದೆನ್ನುವುದು ಲೆಕ್ಕಾಚಾರ. ಇದು ಬರೀ ಯುಪಿಐ ಪಾವತಿಗೆ ಮಾತ್ರ ವಲ್ಲ, ಐಎಂಪಿಎಸ್, ಆರ್‌ಟಿಜಿಎಸ್ ಪಾವತಿ ಗಳಿಗೂ ಅನ್ವಯವಾಗಲಿದೆ. ಆದರೆ ಬಳಕೆದಾರರು ಚಿಂತಿಸಬೇಕಿಲ್ಲ. ಹೊಸಬರಿಗೆ ಪಾವತಿ ಮಾಡುವಾಗ ಈ ನಿರ್ಬಂಧ ಅನ್ವಯವಾಗಲಿದೆ. ಜತೆಗೆ ಈ ನಿಯಮ ಇನ್ನೂ ಪರಿಶೀಲನೆಯ ಹಂತದಲ್ಲಿದೆ, ಜಾರಿಯಾಗಿಲ್ಲ!
ಗಮನಿಸಬೇಕಾದ ಸಂಗತಿ ಯೆಂದರೆ ಯುಪಿಐ ಬಳಕೆದಾರ ಮತ್ತೂಬ್ಬ ಯುಪಿಐ ಬಳಕೆದಾರನೊಂದಿಗೆ ಈ ಹಿಂದೆ ವ್ಯವಹರಿಸಿದ್ದರೆ, ಅಂತಹವರಿಗೆ 2,000 ರೂ. ಮೀರಿದ ಮೊತ್ತ ಕಳುಹಿಸಬಹುದು.
ಆತಂಕಗಳೇನು?: ಅಪರಿಚಿತ ಜಾಗಗಳಲ್ಲಿ ಹಣ ಪಾವತಿ ಮಾಡುವಾಗ ಇದು ಸಮಸ್ಯೆಯಾಗಲಿದೆ. ಜತೆಗೆ ಡಿಜಿಟಲ್ ಇಂಡಿಯಾದ ಕಲ್ಪನೆಯೇ ನಗದುರಹಿತ ವ್ಯವಹಾರ ತಡೆಯುವುದು. ಈ ನಿಯಮ ಜಾರಿಯಾದರೆ ಆ ಯೋಜನೆಗೇ ಹೊಡೆತ ಬೀಳಲಿದೆ. ಮತ್ತೆ ವ್ಯಾಪಾರಿಗಳು, ಗ್ರಾಹಕರು ಕಾರ್ಡ್ ವ್ಯವಹಾರಕ್ಕೆ ಕೈಹಾಕಬೇಕಾಗುತ್ತದೆ. ಗ್ರಾಮಾಂತರ ಭಾಗದಲ್ಲಿ ಕಾರ್ಡ್ ಬಳಕೆ ಇಲ್ಲದಿರುವುದರಿಂದ ಬಹಳ ಗೊಂದಲವಾಗುವುದು ಖಚಿತ.