ಉಡುಪಿ: ಶ್ರೀಕೃಷ್ಣ ಮಠದಲ್ಲಿ ವಾರ್ಷಿಕ ಮಹಾಭಿಷೇಕ ನಡೆಯುವ ಮುನ್ನ ರವಿವಾರ ಗರ್ಭಗುಡಿ ಯನ್ನು ಶುಚಿಗೊಳಿಸುವ “ಉಧ್ವರ್ತನೆ’ ಸೇವೆ ನಡೆಯಿತು.
ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥರು ಬೆಳಗ್ಗಿನ ಪಂಚಾಮೃತಾಭಿಷೇಕದ ವರೆಗಿನ ಪೂಜೆ ನಡೆಸಿದ ಬಳಿಕ ಶುಚಿಗೊಳಿಸುವ ಕೆಲಸ ಆರಂಭ ಗೊಂಡಿತು. ಬೆಳಗ್ಗೆ 5 ಗಂಟೆಯಿಂದ 7.30ರವರೆಗೆ ಶುಚಿಗೊಳಿಸಲಾಯಿತು. ಕೃಷ್ಣಾಪುರ, ಅದಮಾರು ಹಿರಿಯ, ಪಲಿಮಾರು ಹಿರಿಯ- ಕಿರಿಯ, ಪೇಜಾವರ, ಸೋದೆ, ಕಾಣಿಯೂರು ಮಠಾಧೀಶರು ಪಾಲ್ಗೊಂಡು ಕರಸೇವೆ ನಡೆಸಿದರು.
ಓಲಿ ಚಾಪೆಯನ್ನು ಮಡಚಿ ಶ್ರೀಕೃಷ್ಣನ ವಿಗ್ರಹದ ಸುತ್ತ ಇಟ್ಟ ಬಳಿಕ ಓಲಿಯ ಕೊಡೆಯನ್ನು ಬೋರಲು ಹಾಕಲಾಗುತ್ತದೆ. ಆಗ ಸುತ್ತಮುತ್ತ ಶುಚಿಗೊಳಿಸುವಾಗ ಆ ನೀರು ವಿಗ್ರಹಕ್ಕೆ ಬೀಳುವುದಿಲ್ಲ. ಹೀಗೆ ಮಾಡಿದ ಬಳಿಕ ತೆಂಗಿನ ಗರಿಗಳ ಕಡ್ಡಿಯಿಂದ ಮಾಡಿದ ಹೊಸ ಸೂಡಿಗಳನ್ನು ಹಿಡಿದು ಸ್ವಾಮೀಜಿಯವರು ಮೇಲ್ಭಾಗ, ಗೋಡೆಯ ಭಾಗ, ನೆಲ ಭಾಗವನ್ನು ಶುಚಿಗೊಳಿಸುತ್ತಾರೆ. ಆಗ ತಲೆ ಮೇಲೆ ಕಸ ಬೀಳಬಾರದು ಎಂದು ಬಾಳೆ ಎಲೆಯ ಟೋಪಿ ಧರಿಸಿಕೊಳ್ಳುತ್ತಾರೆ. ಇದೆಲ್ಲ ಕೆಲಸಗಳನ್ನು ಸ್ವಾಮೀಜಿಯವರು ಮಾತ್ರ ನಡೆಸುತ್ತಾರೆ. ಮಠದ ಸಿಬಂದಿ ಗಳು ಇವರಿಗೆ ಸಹಕರಿಸುತ್ತಾರೆ.
ಅದಮಾರು ಹಿರಿಯ ಸ್ವಾಮೀಜಿ ಯವರು ಅದಮಾರು ಮೂಲಮಠಕ್ಕೆ ತೆರಳಿ ಅಲ್ಲಿನ ಉಧ್ವರ್ತನೆ ಸೇವೆಯನ್ನು ನಡೆಸಿದರು. ಜೂ. 30ರಂದು ಮಹಾಭಿಷೇಕ ನಡೆಯುತ್ತದೆ.