ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟ ಉಪೇಂದ್ರ ತಮಗೆ ಅನಿಸಿದ್ದನ್ನು ಈ ವೇದಿಕೆಯಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಸಿನಿಮಾಕ್ಕಿಂತ ಹೆಚ್ಚಾಗಿ ಸಾಮಾಜಿಕ, ರಾಜಕೀಯ ವಿಂಷಯಗಳ ಕುರಿತಾಗಿ ಉಪೇಂದ್ರ ಟ್ವೀಟ್ ಮಾಡುತ್ತಿರುತ್ತಾರೆ. ಮೊನ್ನೆಯಷ್ಟೇ ಸರ್ಕಾರಕ್ಕೆ ಒಂದಷ್ಟು ಟಿಪ್ಸ್ ನೀಡಿದ್ದ ಉಪೇಂದ್ರ ಈಗ ಸ್ವದೇಶಿ ವಿಚಾರದ ಕುರಿತಾಗಿ ಟ್ವೀಟ್ ಮಾಡಿದ್ದಾರೆ.
ರೋಗ ಬರೋದು ದೇಹಕ್ಕೆ ಎಂದು ವಿದೇಶಿ ಶ್ರೀಮಂತ ಬುದ್ಧಿಜೀವಿಗಳು ತಿಳಿದುಕೊಂಡಿದ್ದಾರೆ. ಆದರೆ, ರೋಗ ಬರೋದು ದೇಹಕ್ಕಲ್ಲ, ಮನಸಿಗೆ ಅಂತ ನಮ್ಮ ದೇಶದ ಎಷ್ಟೋ ಜನ ಸಾಧು-ಸನ್ಯಾಸಿಗಳು ಹೇಳಿದ್ದು ನಾವು ಮರೆತುಬಿಟ್ಟಿದ್ದೀವಿ. ವಿದೇಶಿ ವಸ್ತುಗಳನ್ನು ಮಾತ್ರವಲ್ಲ, ವಿಚಾರವನ್ನೂ ತಿರಸ್ಕರಿಸಿ. ಸ್ವದೇಶಿ ವಿಚಾರ ಪುರಸ್ಕರಿಸಿ ಮತ್ತು ವಸ್ತು ಖರೀದಿಸಿ ಎಂದು ಉಪೇಂದ್ರ ಟ್ವೀಟ್ ಮೂಲಕ ಹೇಳಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಸ್ವದೇಶಿ ವಸ್ತುಗಳನ್ನು ಬಳಸುವಂತೆ ಮನವಿ ಮಾಡಿದ್ದರು. ಅದರ ಬೆನ್ನಲ್ಲೇ ಈಗ ಉಪೇಂದ್ರ ಕೂಡಾ ಸ್ವದೇಶಿ ವಸ್ತು ಹಾಗೂ ವಿಚಾರಗಳನ್ನು ಪುರಸ್ಕರಿಸುವಂತೆ ಮನವಿ ಮಾಡಿದ್ದಾರೆ.
ಸರ್ಕಾರಕ್ಕೆ ಉಪ್ಪಿ ಟಿಪ್ಸ್: ಇನ್ನು, ಉಪೇಂದ್ರ ರಾಜ್ಯ ಸರ್ಕಾರಕ್ಕೆ ಸಲಹೆವೊಂದನ್ನು ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಿಯಲ್ ಸ್ಟಾರ್, ಸರ್ಕಾರವು ಬಿಪಿಎಲ್, ರಸ್ತೆ ಬದಿಯ ವ್ಯಾಪಾರಸ್ಥರು, ಕಟ್ಟಡ-ವಲಸೆ ಕೂಲಿ ಕಾರ್ಮಿಕರು, ವಿಕಲಾಂಗಚೇತನರು, ವಯೋವೃದ್ಧರು, ಆಟೋ-ಕ್ಯಾಬ್ ಚಾಲಕರು ಇತರೆ ಎಲ್ಲ ವರ್ಗದ ಜನರ ಸಂಪೂರ್ಣ ಮಾಹಿತಿಗಳನ್ನು ಪಾರದರ್ಶಕವಾಗಿ ಸಂಗ್ರಹಿಸಬೇಕು. ಈ ಮೂಲಕ ಅಗತ್ಯವಸ್ತುಗಳು ತಲುಪ ಬೇಕಾದವರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ರಾಜಕೀಯ ಪಕ್ಷಗಳ ವಿರುದ್ಧ ಉಪೇಂದ್ರ ಫುಲ್ ಗರಂ ಆಗಿದ್ದಾರೆ.
ಎಲ್ಲಾ ರೀತಿಯ ಜನಸಾಮಾನ್ಯರ ವಿವರಗಳನ್ನು ಸಂಗ್ರಹಿಸಿ ಅವುಗಳನ್ನು ಪಾರದರ್ಶಕವಾಗಿ ಪ್ರಕಟಿಸಬೇಕು. ಇದರಿಂದಾಗಿ ಇಷ್ಟು ವರ್ಷ ಅದನ್ನು ಮಾಡಿದ್ವಿ, ಇದನ್ನ ಮಾಡಿದ್ವಿ ಎನ್ನುವ ರಾಜಕೀಯ ಪಕ್ಷಗಳ ಮಾತು ಸತ್ಯವೋ? ಸುಳ್ಳೊ ಅನ್ನೊದು ತಿಳಿಯುತ್ತದೆ ಎಂದು ಸವಾಲು ಹಾಕಿದ್ದಾರೆ. ಅಷ್ಟೇ ಅಲ್ಲದೆ ಸರಿ ಸುಮಾರು ಶೇ.40ರಷ್ಟು ಜನರ ತೆರಿಗೆ ಹಣದಲ್ಲಿ ಸಂಬಳ, ಭತ್ಯೆಗಳನ್ನೆಲ್ಲಾ ಪಡೆಯುವ ದೊಡ್ಡ ಆಡಳಿತ ವ್ಯವಸ್ಥೆ ಹೊಂದಿರುವ ಸರ್ಕಾರಕ್ಕೆ ಇದು ಅಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ರಾಜಕೀಯ ಬೆಂಬಲಿಗರು ಇದಕ್ಕೆ ಉತ್ತರಿಸಬೇಕು ಎಂದು ಕೇಳಿಕೊಂಡಿದ್ದಾರೆ