ಬೆಂಗಳೂರು: ಕಿಚ್ಚ ಸುದೀಪ್ (Kiccha Sudeep) ತನ್ನ ತಾಯಿಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಬಾಲ್ಯದಿಂದ ಸಾಕಿ, ಸಲಹಿದ ಆಪ್ತ ಜೀವವನ್ನು ಕಳೆದುಕೊಂಡ ನೋವು ಸುದೀಪ್ ಅವರನ್ನು ಕಾಡಲು ಶುರುವಾಗಿದೆ.
“ನನ್ನ ತಾಯಿ, ಪಕ್ಷಪಾತವಿಲ್ಲದ, ಪ್ರೀತಿಯ, ಕ್ಷಮಿಸುವ, ಕಾಳಜಿವಹಿಸುವ ಮತ್ತು ಕೊಡುವ, ಮೌಲ್ಯವನ್ನು ಪಾಲಿಸುವ ಗುಣವನ್ನು ಹೇಳಿಕೊಟ್ಟ ಜೀವ. ಅವರು ಜೀವನದಲ್ಲಿ ನನ್ನ ಪಕ್ಕದಲ್ಲಿದ್ದ ಮಾನವ ರೂಪದ ದೇವರಾಗಿದ್ದರು. ನನ್ನ ಪಾಲಿಗೆ ನನ್ನ ತಾಯಿ ಹಬ್ಬ, ನನ್ನ ಗುರು, ನನ್ನ ಹಿತೈಷಿ ಮತ್ತು ನನ್ನ ಮೊದಲ ಅಭಿಮಾನಿ. ನನ್ನ ಕೆಟ್ಟ ಕೆಲಸವನ್ನೂ ಇಷ್ಟಪಟ್ಟವಳು ಅವರೀಗ ಸುಂದರ ನೆನಪು ಮಾತ್ರ” ಎಂದು ಭಾವುಕರಾಗಿದ್ದಾರೆ.
“ನನ್ನ ನೋವನ್ನು ವ್ಯಕ್ತಪಡಿಸಲು ನನ್ನ ಬಳಿ ಈಗ ಪದಗಳಿಲ್ಲ. ಶೂನ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. 24 ಗಂಟೆಯಲ್ಲಿ ಎಲ್ಲವೂ ಬದಲಾಗಿ ಹೋಯಿತು” ಎಂದು ಬರೆದುಕೊಂಡಿದ್ದಾರೆ.
“ಪ್ರತಿದಿನ ಮುಂಜಾನೆ 5:30ರ ಸಮಯದಲ್ಲಿ ʼಗುಡ್ ಮಾರ್ನಿಂಗ್ ಕಂದಾʼ ಎಂದು ನನ್ನ ತಾಯಿಯ ಕಡೆಯಿಂದ ಸಂದೇಶ ಬರುತ್ತಿತ್ತು. ಅವರು ಅಕ್ಟೋಬರ್ 18ರಂದು ನನಗೆ ಕೊನೆಯ ಬಾರಿ ಸಂದೇಶ ಕಳುಹಿಸಿದ್ದಾರೆ. ಮರುದಿನ ಬೆಳಗ್ಗೆ ಬಿಗ್ ಬಾಸ್ ಸೆಟ್ ನಿಂದ ಎದ್ದಾಗ ಆ ದಿನ ಅಮ್ಮನ ಸಂದೇಶ ಬಂದಿರಲಿಲ್ಲ. ಹಲವು ವರ್ಷಗಳಲ್ಲಿ ಅವರ ಸಂದೇಶವನ್ನು ಮಿಸ್ ಮಾಡಿಕೊಂಡಿದ್ದು ಇದೇ ಮೊದಲು” ಎಂದು ಬರೆದುಕೊಂಡಿದ್ದಾರೆ.
“ಅಂದು ಅಮ್ಮನಿಗೆ ಸಂದೇಶ ಕಳುಹಿಸಿದೆ. ಆ ಬಳಿಕ ಫೋನ್ ಮಾಡಿ ವಿಚಾರಿಸೋಣವೆಂದರೆ ಬಿಗ್ ಬಾಸ್ ಎಪಿಸೋಡ್ ಮಾಡುವ ಭರದಲ್ಲಿ ಅದು ಸಾಧ್ಯವಾಗಲಿಲ್ಲ. ಶನಿವಾರದ ಎಪಿಸೋಡ್ ಮಾಡಲು ಸ್ಟೇಜ್ ಗೆ ಹೋದಾಗ ಅಮ್ಮನನ್ನುಆಸ್ಪತ್ರೆಗೆ ಸೇರಿಸಿದ್ದಾರೆ ಎನ್ನುವ ಸಂದೇಶ ಬಂತು. ಕೂಡಲೇ ನನ್ನ ಅಕ್ಕನಿಗೆ ಕಾಲ್ ಮಾಡಿ, ವೈದ್ಯರ ಬಳಿ ಮಾತನಾಡಿ ಸ್ಟೇಜ್ ಹತ್ತಿದೆ. ಇದಾದ ನಂತರ ಕೆಲ ಸಮಯದ ಬಳಿಕ ನನ್ನ ಅಮ್ಮನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನುವ ಸಂದೇಶ ನನ್ನ ತಂಡದವರಿಗೆ ಬಂತು. ಇಂತಹ ಅಸಹಾಯಕ ಸ್ಥಿತಿಯನ್ನು ನಾನು ಅನುಭವಿಸಿದ್ದು ಇದೇ ಮೊದಲು. ಎಪಿಸೋಡ್ ಮಾಡುವಾಗ ನನ್ನ ತಲೆಯಲ್ಲಿ ಹಲವು ಯೋಚನೆಗಳು ಓಡಾಡುತಿತ್ತು. ಮನಸ್ಸಿನಲ್ಲಿ ಭಯವಿತ್ತು. ಆದರೂ ಶಾಂತಿಯಿಂದ ಎಪಿಸೋಡ್ ಮುಗಿಸಿದೆ. ಏನೇ ಆಗಲಿ ಅರ್ಧದಲ್ಲಿ ಕೆಲಸ ಬಿಡಬೇಡ ಎನ್ನುವ ನನ್ನ ಅಮ್ಮ ಹೇಳಿಕೊಟ್ಟ ಪಾಠವೇ ಇದು” ಎಂದು ನೆನೆದಿದ್ದಾರೆ.
ಶನಿವಾರದ ಎಪಿಸೋಡ್ ಮುಗಿಸಿ ಕೂಡಲೇ ಆಸ್ಪತ್ರೆಗೆ ಹೋದೆ. ನಾನು ತಲುಪುವ ಮೊದಲೇ ತಾಯಿಯನ್ನು ವೆಂಟಿಲೇಟರ್ ನಲ್ಲಿ ಇರಿಸಿದ್ದರು. ನನ್ನ ತಾಯಿ ಪ್ರಜ್ಞೆಯಲ್ಲಿರುವಾಗ ನನಗೆ ಕೊನೆಗೆ ನೋಡಲು ಸಾಧ್ಯವಾಗಲೇ ಇಲ್ಲ. ಭಾನುವಾರ ಕೊನೆಯುಸಿರು ಎಳೆಯುವ ಮುನ್ನ ಅಮ್ಮ ಸಾಕಷ್ಟು ಹೋರಾಡಿದ್ದರು. ಕೆಲವೇ ಗಂಟೆಗಳಲ್ಲಿ ಹಲವು ಬದಲಾವಣೆಗಳಾದವು.
ಈ ಸತ್ಯವನ್ನು, ವಾಸ್ತವವನ್ನು ನಾನು ಹೇಗೆ ಒಪ್ಪಿಕೊಳ್ಳಬೇಕೆನ್ನುವುದು ಗೊತ್ತಾಗುತ್ತಿಲ್ಲ. ನನ್ನ ತಾಯಿ ಶೂಟಿಂಗ್ ಗೆ ಹೋಗುವ ಮುನ್ನ ಬಿಗಿಯಾಗಿ ನನ್ನನ್ನು ಅಪ್ಪಿಕೊಂಡಿದ್ದರು. ಕೆಲವೇ ಗಂಟೆಗಳಲ್ಲಿ ಅವರು ಇಲ್ಲವಾದರು. ನನ್ನ ಜೀವನದ ಅತ್ಯಮೂಲ್ಯವಾದ ಮುತ್ತು ಕಳೆದು ಹೋಗಿದೆ. ಅವಳು ಶಾಂತಿಯಿಂದ ತುಂಬಿದ ಸ್ಥಳವನ್ನು ತಲುಪಿದ್ದಾಳೆ ಎಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.