ಅಹಮದಾಬಾದ್: ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ನೂತನ ಸೀಸನ್ ನ ಐಪಿಎಲ್ ನಲ್ಲಿ ಶುಭಾರಂಭ ಮಾಡಿದೆ. ಶುಭ್ಮನ್ ಗಿಲ್, ರಶೀದ್ ಖಾನ್ ಸೇರಿ ಹಲವು ಉತ್ತಮ ಪ್ರದರ್ಶನಗಳ ನೆರವಿನಿಂದ ಹಾರ್ದಿಕ್ ಪಾಂಡ್ಯ ತಂಡವು ಗೆಲುವು ಆರಂಭ ಪಡೆಯಿತು.
ಆದರೆ ಗೆಲುವಿನ ಸಂತಸದ ನಡುವೆ ಗುಜರಾತ್ ಟೈಟಾನ್ಸ್ ಗೆ ಆಘಾತ ಎದುರಾಗಿದೆ. ಅನುಭವಿ ಆಟಗಾರ ಕೇನ್ ವಿಲಿಯಮ್ಸನ್ ಅವರು ಮೊದಲು ಪಂದ್ಯದಲ್ಲೇ ಗಾಯಗೊಂಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ರುತುರಾಜ್ ಗಾಯಕ್ವಾಡ್ ಬಾರಿಸಿದ ಚೆಂಡನ್ನು ಹಿಡಿಯುವ ಪ್ರಯತ್ನದಲ್ಲಿ ವಿಮಿಯಮ್ಸನ್ ಗಾಯಗೊಂಡರು. ನೋವಿನಿಂದ ಬಳಲುತ್ತಿದ್ದ ಅವರನ್ನು ಕೂಡಲೇ ಮೈದಾನದಿಂದ ಹೊರಕ್ಕೆ ಕರೆದುಕೊಂಡು ಹೋಗಲಾಗಿದೆ. ಬಳಿಕ ಅವರು ಆಟಕ್ಕೆ ಮರಳಲಿಲ್ಲ. ಅವರ ಬದಲಿಗೆ ಸಾಯಿ ಸುದರ್ಶನ್ ಅವರು ಇಂಪಾಕ್ಟ್ ಆಟಗಾರ ರೂಪದಲ್ಲಿ ಬಂದರು.
ಕೇನ್ ಗಾಯದ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ, “ಅವರ ಗಾಯದ ಗಂಭೀರತೆಯ ಬಗ್ಗೆ ಇನ್ನೂ ತಿಳಿದಿಲ್ಲ. ಅವರನ್ನು ಸ್ಕ್ಯಾನಿಂಗ್ ಗಾಗಿ ಕರೆದುಕೊಂಡು ಹೋಗಲಾಗಿದೆ. ಮೊಣಕಾಲಿಗೆ ನೋವಾಗಿದೆ” ಎಂದರು.
Related Articles
ಕೇನ್ ವಿಲಿಯಮ್ಸನ್ ಅವರು ಸಂಪೂರ್ಣ ಕೂಟದಿಂದ ಹೊರಬಿದ್ದಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದೆ. ಆದರೆ ಅಧಿಕೃತ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.
32 ವರ್ಷ ವಯಸ್ಸಿನ ವಿಲಿಯಮ್ಸನ್ ಇತ್ತೀಚೆಗೆ ಮೊಣಕೈ ಗಾಯದಿಂದ ಚೇತರಿಸಿಕೊಂಡರು, ಕಳೆದ ಎರಡು ವರ್ಷಗಳಿಂದ ಮೊಣಕೈ ನೋವು ಅನುಭವಿಸುತ್ತಿದ್ದರು, ಇದರಿಂದಾಗಿ ನ್ಯೂಜಿಲೆಂಡ್ ಗಾಗಿ ಅನೇಕ ಪಂದ್ಯಗಳನ್ನು ಅವರು ಕಳೆದುಕೊಳ್ಳುವಂತಾಗಿತ್ತು.