ಲಕ್ನೋ: ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾನುವಾರ ಸಂಪುಟ ವಿಸ್ತರಣೆ ನಡೆಸಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಜಿತಿನ್ ಪ್ರಸಾದ್ , ಮಹಿಳಾ ಶಾಸಕಿ ಸೇರಿ 7 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಅವರು ನೂತನ ಸಚಿವರುಗಳಿಗೆ ಪ್ರಮಾಣವಚನ ಬೋಧಿಸಿದರು.
ಸಂಪುಟ ವಿಸ್ತರಣೆಯ ಬಳಿಕ ಯೋಗಿ ಸಂಪುಟದ ಸಚಿವರ ಸಂಖ್ಯೆ 54 ಕ್ಕೆ ಏರಿದ್ದು 6 ಸ್ಥಾನಗಳನ್ನು ಖಾಲಿ ಬಿಡಲಾಗಿದೆ
ಜೂನ್ ನಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಬ್ರಾಹ್ಮಣ ಸಮುದಾಯದ ಪ್ರಮುಖ ನಾಯಕರಾದ ಜಿತಿನ್ ಪ್ರಸಾದ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ನೀಡಲಾಗಿದ್ದರೆ, ಜಾತಿ ಲೆಕ್ಕಾಚಾರವನ್ನು ಮಾಡಿ ಬಲರಾಮಪುರದ ಎಸ್ ಸಿ ಸಮುದಾಯದ ಪಲ್ಟು ರಾಮ್, ಬರೇಲಿಯ ಕೂರ್ಮಿ ಸಮುದಾಯದ ಛತ್ರಪಾಲ್ ಗಂಗ್ವಾರ್,ಘಾಜಿಪುರದ ಬಿಂದ್ ಸಮುದಾಯದ ಸಂಗೀತಾ ಬಲವಂತ್, ಆಗ್ರಾದ ಧರ್ಮವೀರ್ ಪ್ರಜಾಪತಿ, ಎಸ್ ಟಿ ಸಮುದಾಯದ ಸಂಜೀವ್ ಕುಮಾರ್ ಗೊಂಡ್ ಮತ್ತು ಎಸ್ ಸಿ ಸಮುದಾಯದ ದಿನೇಶ್ ಖಟಿಕ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.
ಡಾ.ಮನಮೋಹನ್ ಸಿಂಗ್ ಅವರ ಸಂಪುಟದಲ್ಲಿ ರಾಜ್ಯ ಖಾತೆಯ ಸಚಿವರಾಗಿದ್ದ ಜಿತಿನ್ ಪ್ರಸಾದ್, ರಾಹುಲ್ ಗಾಂಧಿ ಅವರಿಗೂ ಆಪ್ತರಾಗಿದ್ದರು.