ಒಂದು ಕಡೆ ಉಗ್ರಪ್ರತಾಪಿ ಶಿವರುದ್ರೇಗೌಡ, ಮತ್ತೂಂದು ಕಡೆ ಪ್ರೇಮಿಗಳನ್ನು ಕಂಡರೆ “ಹೆವೀ ಡೋಸೇಜ್’ ಕೊಡುವ ಪೊಲೀಸ್ ಇನ್ಸ್‌ಪೆಕ್ಟರ್, ಇದರ ಮಧ್ಯೆ “ಮೈನರ್’ ಹುಡುಗಿ…. ಇಷ್ಟೂ ಮಂದಿ ಮುಖಾಮುಖೀಯಾಗುವುದು ಚಿ.ತು. ಸಂಘದ ಉಪಾಧ್ಯಕ್ಷ ನಾರಾಯಣನಿಗೆ… ಮುಂದೆ ನೀವೇ ಊಹಿಸಿಕೊಳ್ಳಿ ಆತನ ಪರಿಸ್ಥಿತಿ ಏನಾಗಬೇಡ ಎಂಬುದನ್ನು…
ಈ ವಾರ ತೆರೆಕಂಡಿರುವ “ಉಪಾಧ್ಯಕ್ಷ’ ಚಿತ್ರದಲ್ಲಿ ಏನಿದೆ ಎಂದರೆ ಭರ್ಜರಿ ನಗುವಿದೆ, ಪ್ರೀತಿ ಇದೆ, ಸಣ್ಣದೊಂದು ಕಿಚ್ಚಿದೆ, ಸಾಧು ಕೈಯಲ್ಲೊಂದು ಮಚ್ಚಾ ಇದೆ. ಈ ಸಿನಿಮಾ ಬಗ್ಗೆ ಒಂದೇ ಮಾತಲ್ಲಿ ಹೇಳುವುದಾದರೆ ಇದೊಂದು ಫ್ಯಾಮಿಲಿ ಡ್ರಾಮಾ. ಚಿ.ತು. ಸಂಘದ ಉಪಾಧ್ಯಕ್ಷ ನಾರಾಯಣನ ಕಾಮಿಡಿ ಕಮಾಲ್ ಮೂಲಕ ಆರಂಭವಾಗುವ ಸಿನಿಮಾ ಮುಂದೆ ಸಾಗುತ್ತಾ ಒಂದಷ್ಟು ಗಂಭೀರವಾಗುತ್ತದೆ. ಹಾಗಂತ ನೀವು ಅದೇ ಅಂತಿಮ ಎಂದು ಭಾವಿಸುವಂತಿಲ್ಲ. ಉಪಾಧ್ಯಕ್ಷರ ಕಾರ್ಯವೈಖರಿಯಲ್ಲಿ ಸಾಕಷ್ಟು ಅಂಶಗಳು ಬಂದು ಹೋಗುತ್ತವೆ. ಇವೆಲ್ಲವೂ ಸಿನಿಮಾವನ್ನು ಸದಾ ಲವಲವಿಕೆಯಲ್ಲಿಡುವ ಜೊತೆಗೆ ಸಣ್ಣ ಕುತೂಹಲದೊಂದಿಗೆ ಮುಂದೆ ಸಾಗುತ್ತದೆ.
“ಅಧ್ಯಕ್ಷ’ ಸಿನಿಮಾಕ್ಕೂ ಇದಕ್ಕೂ ಏನಾದರೂ ಕಥೆಯಲ್ಲಿ ಸಂಬಂಧವಿಲ್ಲ. ಆದರೆ, ಅಲ್ಲಿನ ಪಾತ್ರಗಳು ಇಲ್ಲೂ ಮುಂದುವರೆದಿದೆ. ಮುಖ್ಯವಾಗಿ ರವಿಶಂಕರ್ ಅವರ ಶಿವರುದ್ರೇಗೌಡ ಪಾತ್ರ. ಒಂದು ಕಾಮಿಡಿ ಸಿನಿಮಾದಲ್ಲಿ ಸನ್ನಿವೇಶಗಳ, ಸಣ್ಣಸಣ್ಣ ಡೈಲಾಗ್‌ಗಳ ಮೂಲಕ ನಗಿಸುತ್ತಾ ಸಾಗಬೇಕು. ಅದರಲ್ಲಿ ಉಪಾಧ್ಯಕ್ಷ ಯಶಸ್ವಿಯಾಗಿದೆ.
ಮೊದಲ ಬಾರಿಗೆ ಹೀರೋ ಆಗಿರುವ ಚಿಕ್ಕಣ್ಣ ಪಾತ್ರದಲ್ಲಿ ಮಿಂಚಿದ್ದಾರೆ. ತಮ್ಮ ಕಾಮಿಡಿ ಟೈಮಿಂಗ್ ಮೂಲಕ ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ಅವರು ಫೈಟ್ ಮಾಡಿಲ್ಲ ಎಂಬುದು ಸಮಾಧಾನದ ವಿಚಾರ. ಆದರೆ, ಡ್ಯಾನ್ಸ್ ಮಾಡಲು ಪ್ರಯತ್ನಿಸಿದ್ದಾರೆ. ನಾಯಕಿ ಮಲೈಕಾ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಉಳಿದಂತೆ ರವಿಶಂಕರ್ ಗಮನ ಸೆಳೆಯುತ್ತಾರೆ. ಶರಣ್ ಅವರ ಎಂಟ್ರಿ ಕಥೆಗೊಂದು ತಿರುವು ನೀಡಿದೆ.
ರವಿಪ್ರಕಾಶ್ ರೈ