ತಮಿಳುನಾಡು(ತಿರುಪುರ್): ತಮಿಳುನಾಡು ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಡಿಎಂಕೆಯ ಎ.ರಾಜಾ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಿರುಪುರ್ ನಲ್ಲಿ ನಡೆದ ಸಾರ್ವಜನಿಕ ಚುನಾವಣಾ ಪ್ರಚಾರ ಸಭೆಯಲ್ಲಿ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ರಾಹುಲ್ ಗಾಂಧಿ ಬಳಿ ಹೋದಾಗ ಹುಡುಗಿಯರು ಹುಷಾರಾಗಿರಿ, ಅವರಿಗೆ ಮದುವೆಯಾಗಿಲ್ಲ : ಮಾಜಿ ಸಂಸದ
ಎ.ರಾಜಾ ಅವರ ಹೆಸರನ್ನು ಉಲ್ಲೇಖಿಸದೇ ವಾಗ್ದಾಳಿ ನಡೆಸಿರುವ ಪ್ರಧಾನಿ ಮೋದಿ, ತಮಿಳುನಾಡಿನಲ್ಲಿ ನಾರಿ ಶಕ್ತಿ ವಿರುದ್ಧ ಯುಪಿಎ ಇತ್ತೀಚೆಗೆ ನಿಷ್ಪ್ರಯೋಜಕ 2ಜಿ ಮಿಸೈಲ್ ಅನ್ನು ಉಪಯೋಗಿಸಿಕೊಂಡಿದೆ ಎಂದು ವ್ಯಂಗ್ಯವಾಡಿದರು.
ಕೆಲವು ದಿನಗಳ ಹಿಂದಷ್ಟೇ ಯುಪಿಎ ಈ ಮಿಸೈಲ್(ಎ.ರಾಜಾ) ಅನ್ನು ಬಳಸಿಕೊಂಡು ತಮಿಳುನಾಡಿನ ನಾರಿ ಶಕ್ತಿ ಮೇಲೆ ದಾಳಿ ನಡೆಸಿದೆ ಎಂದು ಪ್ರಧಾನಿ ಆರೋಪಿಸಿದರು. ಎ.ರಾಜಾ ಯುಪಿಎ ಸರ್ಕಾರದ ಅವಧಿಯಲ್ಲಿ 2ಜಿ ತರಂಗಾಂತರ ಹರಾಜು ಪ್ರಕರಣದಲ್ಲಿ ಶಾಮೀಲಾಗಿದ್ದು, ಇದನ್ನು ಉದಾಹರಣೆಯನ್ನಾಗಿಟ್ಟುಕೊಂಡು ಪ್ರಧಾನಿ ರಾಜಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಮತ್ತು ಡಿಎಂಕೆ ಮುಖ್ಯಮಂತ್ರಿಯ ಗೌರವಾನ್ವಿತ ತಾಯಿಯನ್ನು ಅವಮಾನಿಸಿದ್ದಾರೆ. ಒಂದು ವೇಳೆ ಇವರು ಅಧಿಕಾರದ ಗದ್ದುಗೆ ಏರಿದರೆ ತಮಿಳುನಾಡಿನ ಇತರ ಮಹಿಳೆಯರನ್ನು ಕೂಡಾ ಅವಮಾನಿಸುತ್ತಾರೆ ಎಂದು ಪ್ರಧಾನಿ ತಿಳಿಸಿದರು.