Advertisement

ಕಾವೇರಿದ ಚುನಾವಣ ಕಣ; ಉ.ಪ್ರದೇಶ: 24 ಗಂಟೆಗಳಲ್ಲಿ ಇಬ್ಬರು ಸಚಿವರ ರಾಜೀನಾಮೆ

12:21 AM Jan 13, 2022 | Team Udayavani |

ಹೊಸದಿಲ್ಲಿ: ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಪಂಚರಾಜ್ಯಗಳಲ್ಲಿ ಚುನಾವಣ ಕಾವು ಏರತೊಡಗಿದ್ದು, “ವಲಸೆ ಹಕ್ಕಿ’ಗಳ ಕಲರವ ತೀವ್ರಗೊಂಡಿದೆ. ಉತ್ತರಪ್ರದೇಶದಲ್ಲಂತೂ ಕೇವಲ 24 ಗಂಟೆಗಳ ಅವಧಿಯಲ್ಲಿ ಸಿಎಂ ಯೋಗಿ ಆದಿತ್ಯನಾಥ್‌ ಸಂಪುಟದ ಇಬ್ಬರು ಸಚಿವರು ರಾಜೀನಾಮೆ ನೀಡಿದ್ದಾರೆ. ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್‌ ಮೌರ್ಯ ಅವರು ಪದತ್ಯಾಗ ಮಾಡಿದ ಬೆನ್ನಲ್ಲೇ ಬುಧವಾರ ಮತ್ತೂಬ್ಬ ಒಬಿಸಿ ನಾಯಕ, ಅರಣ್ಯ ಸಚಿವ ದಾರಾಸಿಂಗ್‌ ಚೌಹಾಣ್‌ ಕೂಡ ರಾಜೀನಾಮೆ ನೀಡಿ ಸಮಾಜವಾದಿ ಪಕ್ಷದತ್ತ ನಡೆದಿದ್ದಾರೆ.

Advertisement

ಈ ಬೆಳವಣಿಗೆಯು ಬಿಜೆಪಿಗೆ ಆಘಾತ ನೀಡಿದ್ದರೆ ಎಸ್‌ಪಿಗೆ ಹೆಚ್ಚಿನ ಬಲ ತಂದುಕೊಟ್ಟಿದೆ. ರಾಜ್ಯದಲ್ಲಿ ಯಾದವೇತರ ಒಬಿಸಿಗಳ ಮತಗಳನ್ನು ಸೆಳೆಯಲು ಸಮಾಜವಾದಿ ಪಕ್ಷಕ್ಕೆ ಇದು ನೆರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಬುಧವಾರ ಮಾತನಾಡಿರುವ ಮೌರ್ಯ, “ಬಿಜೆಪಿಗೆ ವಾಪಸಾಗುವ ಪ್ರಶ್ನೆಯೇ ಇಲ್ಲ. ಶುಕ್ರವಾರ ಎಸ್‌ಪಿಗೆ ಸೇರ್ಪಡೆಯಾಗುತ್ತೇನೆ’ ಎಂದಿದ್ದಾರೆ. ಇನ್ನೊಂದೆಡೆ, ಬಿಜೆಪಿ ಶಾಸಕ ಅವತಾರ್‌ ಇಸಂಗ್‌ ಭದಾನಾ ಬುಧವಾರ ಜಯಂತ್‌ ಚೌಧರಿ ನೇತೃತ್ವದ ಆರ್‌ಎಲ್‌ಡಿಗೆ ಸೇರಿದ್ದಾರೆ.

ಬಿಜೆಪಿಗೂ ಲಾಭ: ಅತ್ತ ಬಿಜೆಪಿಯಿಂದ ಎಸ್ಪಿಗೆ ಹಲವು ನಾಯಕರು ವಲಸೆ ಹೋದಂತೆ, ಇತ್ತ ಬಿಜೆಪಿಗೂ ಬೇರೆ ಪಕ್ಷಗಳಿಂದ ನಾಯಕರ ಆಗಮನವಾಗುತ್ತಿದೆ. ಬುಧವಾರ ಕಾಂಗ್ರೆಸ್‌ ಶಾಸಕ ನರೇಂಶ್‌ ಸೈನಿ ಮತ್ತು ಎಸ್‌ಪಿ ಶಾಸಕ ಹರಿ ಓಂ ಯಾದವ್‌ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ರಾಜೀನಾಮೆ ಬೆನ್ನಲ್ಲೇ ವಾರಂಟ್‌: ವಿಶೇಷವೆಂದರೆ, ಬಿಜೆಪಿಗೆ ರಾಜೀನಾಮೆ ನೀಡಿದ ಮಾರನೇ ದಿನವೇ ಮಾಜಿ ಸಚಿವ ಸ್ವಾಮಿ ಪ್ರಸಾದ್‌ ಮೌರ್ಯ ವಿರುದ್ಧ ಸ್ಥಳೀಯ ಕೋರ್ಟ್‌ ಬಂಧನ ವಾರಂಟ್‌ ಜಾರಿ ಮಾಡಿದೆ. 7 ವರ್ಷಗಳ ಹಿಂದೆ ಹಿಂದೂ ದೇವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಪ್ರಕರಣ ಸಂಬಂಧ ವಾರಂಟ್‌ ಜಾರಿ ಮಾಡಲಾಗಿದೆ.

ಇದನ್ನೂ ಓದಿ:ಯೋಗಿ ಆದಿತ್ಯನಾಥ್ ರನ್ನು ಅಯೋಧ್ಯೆಯಿಂದ ಕಣಕ್ಕಿಳಿಸಲು ಬಿಜೆಪಿ ಸಿದ್ಧತೆ?

Advertisement

ಉಪಾಧ್ಯಾಯ ವಜಾ: ಉತ್ತರಾಖಂಡದಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇರೆಗೆ ರಾಜ್ಯ ಘಟಕದ ಮಾಜಿ ಅಧ್ಯಕ್ಷರಾಗಿದ್ದ ಕಿಶೋರ್‌ ಉಪಾಧ್ಯಾಯ ಅವರನ್ನು ಕಾಂಗ್ರೆಸ್‌ ಎಲ್ಲ ಹುದ್ದೆಗಳಿಂದ ವಜಾ ಮಾಡಿದೆ. ಉಪಾಧ್ಯಾಯ ಅವರು ರಾಜ್ಯ ಕಾಂಗ್ರೆಸ್‌ ಸಮನ್ವಯ ಸಮಿತಿ ಅಧ್ಯಕ್ಷರಾಗಿಯೂ, ರಾಜ್ಯ ಕಾಂಗ್ರೆಸ್‌ ಕೋರ್‌ ಕಮಿಟಿ ಮತ್ತು ಉತ್ತರಾಖಂಡ ಕಾಂಗ್ರೆಸ್‌ ಪ್ರದೇಶ ಚುನಾವಣ ಸಮಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.

ಕೇಜ್ರಿವಾಲ್‌ ಪಂಜಾಬ್‌ ಮಾದರಿ ಅನಾವರಣ
ಆಮ್‌ ಆದ್ಮಿ ಪಕ್ಷದ “ಪಂಜಾಬ್‌ ಮಾದರಿ’ಯನ್ನು ಅನಾವರಣ ಮಾಡಿರುವ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌, “ಯುವಕರಿಗೆ ಉದ್ಯೋಗ, ಭ್ರಷ್ಟಾಚಾರಮುಕ್ತ ಆಡಳಿತ, ಧಾರ್ಮಿಕ ಅಪಚಾರ ಪ್ರಕರಣಗಳಲ್ಲಿ ನ್ಯಾಯ’ ಒದಗಿಸಿಕೊಡುವ ಭರವಸೆ ನೀಡಿದ್ದಾರೆ. 300 ಯುನಿಟ್‌ವರೆಗೆ ಉಚಿತ ವಿದ್ಯುತ್‌, ಡ್ರಗ್‌ ಹಾವಳಿಗೆ ಬ್ರೇಕ್‌, 16 ಸಾವಿರ ಮೊಹಲ್ಲಾ ಕ್ಲಿನಿಕ್‌ ಸ್ಥಾಪನೆ, 18 ವರ್ಷ ದಾಟಿದ ಮಹಿಳೆಯರಿಗೆ ಮಾಸಿಕ 1,000 ರೂ. ನೀಡುವುದಾಗಿಯೂ ಘೋಷಿಸಿದ್ದಾರೆ. ಈ ನಡುವೆ, ಪಂಜಾಬ್‌ ಅಸೆಂಬ್ಲಿ ಚುನಾವಣೆಯಲ್ಲಿ ಕಣಕ್ಕಿಳಿಯಲು ಸಿದ್ಧತೆ ನಡೆಸಿರುವ ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಸಮಾಜ್‌ ಮೋರ್ಚಾ ಬುಧವಾರ 10 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಸಮ್ರಾಲಾ ಕ್ಷೇತ್ರದಿಂದ ರೈತರ ನಾಯಕ ಬಲ್ಬಿàರ್‌ ಸಿಂಗ್‌ ರಾಜೇವಾಲ್‌ ಕಣಕ್ಕಿಳಿಯಲಿದ್ದಾರೆ.

73,000 ಲೀ. ಮದ್ಯ, 1,825 ಕೆಜಿ ಗಾಂಜಾ!
ಉತ್ತರಪ್ರದೇಶದಲ್ಲಿ ಚುನಾವಣ ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ 1.45 ಕೋಟಿ ರೂ. ಮೌಲ್ಯದ 73 ಸಾವಿರ ಲೀಟರ್‌ ಮದ್ಯ ಹಾಗೂ 2.5 ಕೋಟಿ ರೂ. ಮೌಲ್ಯದ 1,825 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ ಎಂದು ಚುನಾವಣ ಆಯೋಗ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next