Advertisement

Lok Sabha Election 2024: ದಿಲ್ಲಿ ಗದ್ದುಗೆ ತಲುಪಲು ಉತ್ತರ ಪ್ರದೇಶ ಹೆದ್ದಾರಿ!

10:48 AM Apr 22, 2024 | Team Udayavani |

ದಿಲ್ಲಿ ಗದ್ದುಗೆ ದಕ್ಕಬೇಕಿದ್ದರೆ ಉತ್ತರ ಪ್ರದೇಶವನ್ನು ಗೆಲ್ಲಲೇಬೇಕು ಎಂಬ ಮಾತು ಭಾರತೀಯ ರಾಜಕಾರಣದಲ್ಲಿ ಜನಜನಿತ. ದೇಶದ ಒಟ್ಟು ಜನಸಂಖ್ಯೆಯ ಶೇ.20ರಷ್ಟು ಜನಸಂಖ್ಯೆಯನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ 80 ಲೋಕಸಭೆ ಕ್ಷೇತ್ರಗಳಿವೆ. ಹೀಗಾಗಿ ಯಾವುದೇ ರಾಜಕೀಯ ಪಕ್ಷ ಅಧಿಕಾರದ ಕನಸು ಕಂಡರೆ, ಅದು ಮೊದಲು ನೋಡುವುದು ಉತ್ತರ ಪ್ರದೇಶದತ್ತಲೇ. ಹಾಗಾಗಿಯೇ, 2014ರಲ್ಲಿ ನರೇಂದ್ರ ಮೋದಿ ವಾರಾಣಸಿ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂಲಕ ಬಿಜೆಪಿ ಪರ ವಾತಾವರಣ ನಿರ್ಮಿಸಿದರು ಮತ್ತು ಅದು 2024ರವರೆಗೂ ಮುಂದುವರಿದಿದೆ.

Advertisement

ಕಾಂಗ್ರೆಸ್‌-ಎಸ್‌ಪಿ ಮೈತ್ರಿಕೂಟ, ಬಿಜೆಪಿ ನೇತೃತ್ವದ ಎನ್‌ ಡಿಎ ಮತ್ತು ಬಹುಜನ ಸಮಾಜ ಪಾರ್ಟಿ ಉತ್ತರ ಪ್ರದೇಶದಲ್ಲಿ ಸದ್ಯ ಚುನಾವಣೆ ಗೆಲ್ಲುವ ಪ್ರಮುಖ ಪಕ್ಷಗಳು. ಹಲವು ಕ್ಷೇತ್ರಗಳಲ್ಲಿ ಈ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳಿವೆ. 7
ಹಂತಗಳಲ್ಲಿ ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಏ.19ರಂದು ಪಶ್ಚಿಮ ಯುಪಿಯ 8 ಕ್ಷೇತ್ರಗಳಿಗೆ ಮತದಾನ ನಡೆದಿದೆ.

ಉತ್ತರ ಪ್ರದೇಶದಲ್ಲಿ ರಾಷ್ಟ್ರೀಯತೆಯನ್ನು ಎಷ್ಟೇ ಚುನಾವಣಾ ವಿಷಯವನ್ನಾಗಿಸಿದರೂ ಅಂತಿಮವಾಗಿ ಅಲ್ಲಿನ ಜಾತಿ ಸಮೀಕರಣದ ಮೇಲೆ ಸೋಲು, ಗೆಲುವು ನಿರ್ಧಾರವಾಗುತ್ತದೆ. ಉತ್ತರ ಪ್ರದೇಶದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಒಬಿಸಿಗಳಿದ್ದಾರೆ. ಯಾರು ಹಿಂದುಳಿದ ವರ್ಗ ಮತ್ತು ಅತಿ ಹಿಂದುಳಿದ ವರ್ಗದ ಜನರನ್ನು ಸೆಳೆಯುತ್ತಾರೋ ಅವರು
ಗೆಲ್ಲುತ್ತಾರೆ. ಬಿಜೆಪಿ ಕಳೆದ 2 ಚುನಾವಣೆಯಲ್ಲಿ ಇದೇ ತಂತ್ರ ಅನುಸರಿಸಿತ್ತು. ಆದರೆ, ಈ ಬಾರಿ ಅದೇ ಯಶಸ್ಸು ಮರಳುವುದು ಅನುಮಾನ ಎನ್ನುತ್ತಿದ್ದಾರೆ ತಜ್ಞರು. ಏಕೆಂದರೆ, ಕಾಂಗ್ರೆಸ್‌ ಮತ್ತು ಎಸ್‌ಪಿ ಒಟ್ಟಾಗಿರುವುದಲ್ಲದೇ, ಹಿಂದುಳಿದ ವರ್ಗಗಳು, ದಲಿತ ಮತ್ತು ಅಲ್ಪಸಂಖ್ಯಾತ(ಪಿಡಿಎ) ಸೂತ್ರವನ್ನು ನೆಚ್ಚಿಕೊಂಡಿದೆ. ಇದೇನಾದರೂ ವರ್ಕೌಟ್‌ ಆದರೆ ಬಿಜೆಪಿಗೆ ಸಂಕಷ್ಟ ತಪ್ಪಿದ್ದಲ್ಲ. ಹಾಗೆ ನೋಡಿದರೆ, ಬಿಎಸ್‌ಪಿ ಹೆಚ್ಚು ಮತಗಳನ್ನು ಪಡೆದಷ್ಟೂ ಅದು ಬಿಜೆಪಿಗೆ ಲಾಭವಾಗಲಿದೆ. ಹಾಗಾಗಿ, ಪ್ರತಿಪಕ್ಷಗಳು ಬಿಎಸ್‌ಪಿಯನ್ನು ಬಿಜೆಪಿಯ ಬಿ ಟೀಂ ಎಂದು ಮೊದಲಿಸುತ್ತಿವೆ!

ಮೈ(ಮೋದಿ-ಯೋಗಿ) ಫ್ಯಾಕ್ಟರ್‌: ಉತ್ತರ ಪ್ರದೇಶದಲ್ಲಿ ಕಳೆದ 2 ಅವಧಿಯಿಂದ ಬಿಜೆಪಿ ಸರ್ಕಾರವಿದೆ. ಹಾಗಾಗಿ,
ಉತ್ತರ ಪ್ರದೇಶದಲ್ಲಿ “ಮೈ’ ಫ್ಯಾಕ್ಟರ್‌(ಮೋದಿ-ಯೋಗಿ) ಖಂಡಿತ ಕೆಲಸ ಮಾಡಲಿದೆ. ಇಬ್ಬರ ನಾಯಕರೂ ಮೇಲೂ ಯಾವುದೇ ಕಳಂಕಗಳಿಲ್ಲ. ಇಬ್ಬರೂ ಜನಪ್ರಿಯರು. ಬಿಜೆಪಿ ತನ್ನ ಪೂರ್ಣ ಗೆಲುವಿಗೆ ಈ ಇಬ್ಬರನ್ನೇ ನೆಚ್ಚಿಕೊಂಡಿದೆ. ಇಷ್ಟಾಗಿಯೂ ನಿರುದ್ಯೋಗ, ಬೆಲೆ ಏರಿಕೆಯಂಥ ವಿಷಯಗಳು ಅಡ್ಡಗಾಲು ಹಾಕಬಹುದು.

Advertisement

ಇಂಡಿಯಾ ಕೂಟ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷಕ್ಕೆ ತನ್ನದೇ ಆದ ಮತ ಬ್ಯಾಂಕ್‌ ಹೊಂದಿದೆ. ಅದೇ
ಮಾತನ್ನು ಕಾಂಗ್ರೆಸ್‌ಗೆ ಹೇಳುವಂತಿಲ್ಲ. ಇಂಡಿಯಾ ಕೂಟದ ನೇತೃತ್ವವನ್ನು ವಹಿಸಿದ್ದರೂ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌
ಜೂನಿಯರ್‌ ಪಕ್ಷ. ಹೀಗಿದ್ದೂ, ಇಂಡಿಯಾ ಕೂಟಕ್ಕೆ ಒಂಚೂರು ಆಶಾವಾದವಂತೂ ಇದ್ದೇ ಇದೆ. ವೆಸ್ಟರ್ನ್ ಯುಪಿಯಲ್ಲಿ ಬಿಜೆಪಿಯು ಜಾಟ್‌ ಸೇರಿದಂತೆ ಅದರ ಬೆಂಬಲಿಗರಿಂದಲೇ ಪ್ರತಿರೋಧ ಅನುಭವಿಸಿದೆ. ಅದೇ ರೀತಿ ಪರಿಸ್ಥಿತಿಯನ್ನು ಇಂಡಿಯಾ ಕೂಟವು ಇತರ ಭಾಗಗಳಿಂದ ನಿರೀಕ್ಷಿಸುತ್ತಿದೆ. ಹಾಗೇನಾದರೂ ಆದರೆ ಇಂಡಿಯಾ ಕೂಟಕ್ಕೆ ನಿರೀಕ್ಷೆಗಿಂತ ಹೆಚ್ಚು ಸೀಟು ಬರಬಹುದು.

ಗಮನ ಸೆಳೆಯುವ ಕ್ಷೇತ್ರ ಮತ್ತು ಅಭ್ಯರ್ಥಿಗಳು: ಪ್ರಧಾನಿ ನೇರಂದ್ರ ಮೋದಿ ಸ್ಪರ್ಧಿಸಿರುವ ವಾರಾಣಸಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಧ್ಯಕ್ಷ ಅಜಯ್‌ ರಾಯ್‌ ಕಣದಲ್ಲಿದ್ದಾರೆ. ಮೈನಾಪುರಿಯಲ್ಲಿ ಎಸ್‌ಪಿ ನಾಯಕಿ, ಅಖೀಲೇಶ್‌ ಪತ್ನಿ ಡಿಂಪಲ್‌ ಯಾದವ್‌ ಮತ್ತು ಬಿಜೆಪಿಯ ಅಭ್ಯರ್ಥಿ, ಯುಪಿ ಸಚಿವ ಜೈವೀರ್‌ ಸಿಂಗ್‌ ಠಾಕೂರ್‌ ಕಣದಲ್ಲಿದ್ದಾರೆ. 1991ರಿಂದ ಬಿಜೆಪಿ ವಶದಲ್ಲಿರುವ ಲಕ್ನೋದಿಂದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ಗೆ ಈ ಬಾರಿ ಎಸ್‌ಪಿಯ ರವಿದಾಸ್‌ ಮೆಹೊತ್ರಾ ಮತ್ತು ಬಿಎಸ್‌ಪಿ ಸರ್ವರ್‌ ಮಲಿಕ್‌ ಸವಾಲು ಹಾಕಬಹುದು. ಸುಲ್ತಾನಪುರದಲ್ಲಿ ಬಿಜೆಪಿ ಮನೇಕಾ ಗಾಂಧಿ ಅಭ್ಯರ್ಥಿಯಾಗಿದ್ದಾರೆ. ರಾಯ್‌ ಬರೇಲಿ ಮತ್ತು ಅಮೇಠಿ ದೇಶದ ಗಮನ ಸೆಳೆಯುವ ಸಾಧ್ಯತೆಗಳಿವೆ. ಕಾಂಗ್ರೆಸ್‌ ಈಕ್ಷೇತ್ರಗಳಲ್ಲಿ ಇನ್ನೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ.

2019ರಲ್ಲಿ ರಾಹುಲ್‌ ಗಾಂಧಿ ಅಮೇಠಿ ಸೋತಿದ್ದು, ಮತ್ತೆ ಬಿಜೆಪಿಯ ಸ್ಮತಿ ಇರಾನಿ ವಿರುದ್ಧ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದ ರಾಯ್‌ ಬರೇಲಿಯಿಂದ ಪ್ರಿಯಾಂಕಾ ವಾದ್ರಾ ಸ್ಪರ್ಧಿಸುವ ಸಾಧ್ಯತೆಗಳಿವೆ. ಮೀರತ್‌, ಅಜಮ್‌ಗಢ, ಗೋರಖಪುರ್‌ ಸೇರಿದಂತೆ ಇನ್ನೂ ಹಲವು ಕ್ಷೇತ್ರಗಳ ಕದನ ಕುತೂಹಲಕಾರಿಯಾಗಿದೆ.

■ ಮಲ್ಲಿಕಾರ್ಜುನ ತಿಪ್ಪಾರ

Advertisement

Udayavani is now on Telegram. Click here to join our channel and stay updated with the latest news.

Next