ಕುಷ್ಟಗಿ: ಅಕಾಲಿಕ ಮಳೆಗೆ ಹಿಂಗಾರು ಹಂಗಾಮಿನ ಕಡಲೆ ನಾಶವಾಗಿದ್ದರೆ ಈ ಬೆಳೆಗೂ ಸರ್ವೆ ಮಾಡಲು ಆದೇಶಿಸಲಾಗಿದೆ ಎಂದು ಗಣಿ ಮತ್ತು ವಿಜ್ಞಾನ ಸಚಿವ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಬಸಪ್ಪ ಆಚಾರ ತಿಳಿಸಿದ್ದಾರೆ.
ಕುಷ್ಟಗಿಯಲ್ಲಿ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ ಅವರ ಪ್ರಚಾರಾರ್ಥ ಸಭೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಈಗಾಗಲೇ ಶೇ.90 ರಷ್ಟು ಬೆಳೆ ಹಾನಿ ವರದಿಯ ಮಾಹಿತಿ ಅಪ್ಲೋಡ್ ಆಗಿದೆ. ಮುಂದಿನ ವಾರದಲ್ಲಿ ಎನ್. ಡಿ.ಆರ್.ಎಫ್ ಮಾರ್ಗಸೂಚಿಯನ್ವಯ ರೈತರ ಖಾತೆಗಳಿಗೆ ಡಿ.ಬಿ.ಟಿ. ಮೂಲಕ ಪರಿಹಾರ ಜಮೆಯಾಗುವ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಾಥಮಿಕ ವರದಿಯನ್ವಯ ಕೊಪ್ಪಳ ಜಿಲ್ಲೆಯಲ್ಲಿ 28 ಸಾವಿರ ಹೆಕ್ಟೇರ್, ರಾಯಚೂರು ಜಿಲ್ಲೆಯಲ್ಲಿ 31ಸಾವಿರ ಹೆಕ್ಟೇರ್ ಅದರಲ್ಲೂ ಸಿಂಧನೂರು ತಾಲೂಕಿನಲ್ಲಿ 24 ಸಾವಿರ ಹೆಕ್ಟೇರ್ ಬೆಳೆ ಹಾನಿಯ ಮಾಹಿತಿ ನೀಡಿದರು. ಅಕಾಲಿಕ ಮಳೆಯಿಂದ ಹಾನಿಗೀಡಾದ ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಸತತ ಎರಡು ದಿನ ವಿವಿಧ ಗ್ರಾಮಗಳಿಗೆ ಖುದ್ದು ಬೇಟಿ ನೀಡಿ ರೈತಾಪಿ ವರ್ಗದ ಸಮಸ್ಯೆಗಳಿಗೆ ಸ್ಪಂಧಿಸಿದ್ದೇನೆ ಎಂದರು.
ರಾಯಚೂರು ಜಿಲ್ಲೆಯ ಲಿಂಗಸುಗೂರು ಹಾಗೂ ಸಿಂಧನೂರು ತಾಲೂಕಿನಲ್ಲಿ ಮಳೆಗೆ ಬೆಳೆಹಾನಿಗೆ ಬೇಸತ್ತು ನಾಲ್ವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾನು ಹಾಗೂ ಸಂಸದರು ಸದರಿ ರೈತರ ಮನೆಗೆ ಭೇಟಿ ನೀಡಿ ಅವರ ಕುಟುಂಬದವರಿಗೆ ಆತ್ಮಸ್ಥೈರ್ಯ ತುಂಬಿದ್ದು ಸರ್ಕಾರದಿಂದ ಪರಿಹಾರ ದೊರಕಿಸಲು ಪ್ರಯತ್ನಿಸುವುದಾಗಿ ತಿಳಿಸಿದೆ ಎಂದರು.
ಈ ವೇಳೆ ದೇವದುರ್ಗ ಶಾಸಕ ಶಿವನಗೌಡ ನಾಯಕ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಕೆ.ಶರಣಪ್ಪ ಮತ್ತಿತರಿದ್ದರು.