ಚೆನ್ನೈ:ಕೋವಿಡ್ 19 ವೈರಸ್ ನಿಂದ ಸಾವನ್ನಪ್ಪಿದ ಸಂತ್ರಸ್ತರ ಅಂತ್ಯಕ್ರಿಯೆಯನ್ನು ಗೌರವಯುತವಾಗಿ ನಡೆಸಲು ತಮಿಳುನಾಡು ಸರ್ಕಾರ ಸುಗ್ರೀವಾಜ್ಞೆ ಮೂಲಕ ಕಾಯ್ದೆಯನ್ನು ಜಾರಿಗೊಳಿಸಿದ್ದು, ಒಂದು ವೇಳೆ ಕೋವಿಡ್ 19 ಸೋಂಕಿತರು ಸಾವನ್ನಪ್ಪಿದ್ದು ಅವರ ಅಂತ್ಯಕ್ರಿಯೆಗೆ ಅಡ್ಡಿಪಡಿಸಿದರೆ ಮೂರು ವರ್ಷಗಳ ಜೈಲುಶಿಕ್ಷೆ ಎದುರಿಸಬೇಕಾದೀತು ಎಂದು ವರದಿ ತಿಳಿಸಿದೆ.
ತಮಿಳುನಾಡಿನಲ್ಲಿ ಇನ್ಮುಂದೆ ಕೋವಿಡ್ 19 ಪೀಡಿತ ಸಂತ್ರಸ್ತರ ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸಲು ಯತ್ನಿಸುವುದು ಅಥವಾ ಪ್ರತಿಭಟನೆ ನಡೆಸಿ ಗದ್ದಲ ನಡೆಸಿದರೆ ಕ್ರಿಮಿನಲ್ ಅಪರಾಧವಾಗಲಿದೆ. ಯಾರು ಅಂತಹ ಕಾರ್ಯದಲ್ಲಿ ಭಾಗಿಯಾಗುತ್ತಾರೋ ಅವರು ಮೂರು ವರ್ಷಗಳ ಶಿಕ್ಷೆಗೆ ಗುರಿಯಾಗುವ ಹೊಸ ಕಾಯ್ದೆ ಜಾರಿಗೊಳಿಸಿದೆ.
ಕಳೆದ ವಾರ ಕೋವಿಡ್ ನಿಂದ ಸಾವನ್ನಪ್ಪಿದ್ದ ವೈದ್ಯರೊಬ್ಬರ ಶವಸಂಸ್ಕಾರವನ್ನು ಮಾಡಲು ಗುಂಪೊಂದು ಅಡ್ಡಗಟ್ಟಿ, ಆ್ಯಂಬುಲೆನ್ಸ್ ಮೇಲೆ ದಾಳಿ ನಡೆಸಿ ಗದ್ದಲ ಎಬ್ಬಿಸಿದ್ದರು. ಕೊನೆಗೆ ಸಹ ವೈದ್ಯರು ಇಬ್ಬರು ವಾರ್ಡ್ ಬಾಯ್ಸ್ ಜತೆ ಸೇರಿ ಅಂತ್ಯಕ್ರಿಯೆ ನೆರವೇರಿಸಿದ ಘಟನೆ ಚೆನ್ನೈನಲ್ಲಿ ನಡೆದಿತ್ತು.
ರೋಗಿಗಳನ್ನು ಪರೀಕ್ಷಿಸುವ ಮೂಲಕ ಡಾ.ಸೈಮನ್ ಹೆರ್ಕ್ಯೂಲಸ್ ಅವರಿಗೆ ಕೋವಿಡ್ 19 ಸೋಂಕು ತಗುಲಿತ್ತು. ಅವರ ಶವದ ಅಂತ್ಯಕ್ರಿಯೆ ನಡೆಸಲು ಆ್ಯಂಬುಲೆನ್ಸ್ ನಲ್ಲಿ ತಂದಾಗ ಸ್ಥಳೀಯರು ಇಟ್ಟಿಗೆ, ಕಲ್ಲು, ಬಾಟಲ್ ಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆಯಲ್ಲಿ ಆ್ಯಂಬುಲೆನ್ಸ್ ಚಾಲಕರು, ಕಾರ್ಪೋರೇಷನ್ ಆರೋಗ್ಯ ಅಧಿಕಾರಿಗಳು ಗಾಯಗೊಂಡಿದ್ದರು.
ಸ್ವಯಂಪ್ರೇರಿತವಾಗಿ ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಮದ್ರಾಸ್ ಹೈಕೋರ್ಟ್, ಡಾ.ಸೈಮನ್ ಅವರ ಶವವನ್ನು ಗೌರವಯುತವಾಗಿ ಅಂತ್ಯ ಸಂಸ್ಕಾರ ನಡೆಸುವುದು ಹಕ್ಕಾಗಿತ್ತು. ಈ ಹಿನ್ನೆಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು.
ಮುಖ್ಯಮಂತ್ರಿ ಇ.ಪಳನಿಸ್ವಾಮಿ ಅವರು ರಾಜ್ಯದಲ್ಲಿ ಕೋವಿಡ್ 19 ವೈರಸ್ ನಿಂದ ಸಾವನ್ನಪ್ಪಿದವರಿಗೆ 50 ಲಕ್ಷ ಪರಿಹಾರ ಹಾಗೂ ಯಾರು ಕೋವಿಡ್ 19 ಸೋಂಕಿನಿಂದ ಸಾವನ್ನಪ್ಪುತ್ತಾರೋ ಅವರ ಶವಕ್ಕೆ ಗೌರವಯುತ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ.