ಲಕ್ನೋ(ಉತ್ತರಪ್ರದೇಶ): 15 ವಿದ್ಯಾರ್ಥಿನಿಯರ ಮೇಲೆ ದೈಹಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪಿ ಕಂಪ್ಯೂಟರ್ ಶಿಕ್ಷಕನಿಗೆ ಬೆಂಬಲ ನೀಡಿದ ಆರೋಪದಡಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಸಹ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಕಂಪ್ಯೂಟರ್ ಶಿಕ್ಷಕನನ್ನು ಬಂಧಿಸಿರುವ ಘಟನೆ ಉತ್ತರಪ್ರದೇಶದ ಷಹಜಹಾನ್ ಪುರ್ ಜಿಲ್ಲೆಯ ತಿಲ್ಹಾರ್ ಗ್ರಾಮದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
7 ಮತ್ತು 8ನೇ ತರಗತಿ ವಿದ್ಯಾರ್ಥಿನಿಯರಿಗೆ ದೈಹಿಕ ಕಿರುಕುಳ ನೀಡಿರುವುದಾಗಿ ದೂರು ದಾಖಲಾಗಿತ್ತು. ಮುಖ್ಯೋಪಾಧ್ಯಾಯ ಹಾಗೂ ಸಹ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಾಗಿರುವುದಾಗಿ ವರದಿ ವಿವರಿಸಿದೆ.
ಮೂವರ ವಿರುದ್ಧ ಎಸ್ ಸಿ/ಎಸ್ ಟಿ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮುಖ್ಯೋಪಾಧ್ಯಾಯ ಮತ್ತು ಸಹ ಶಿಕ್ಷಕನನ್ನು ಅಮಾನತುಗೊಳಿಸಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ ಎಂದು ಶಿಕ್ಷಣಾಧಿಕಾರಿ ಕುಮಾರ್ ಗೌರವ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರ ಸಮ್ಮುಖದಲ್ಲಿ ಪೊಲೀಸರು ವಿದ್ಯಾರ್ಥಿನಿಯರ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಕಂಪ್ಯೂಟರ್ ಶಿಕ್ಷಕನನ್ನು ಬಂಧಿಸಲಾಗಿತ್ತು.