ಘಾಜಿಯಾಬಾದ್ (ಉತ್ತರಪ್ರದೇಶ): ಕೆಲವು ದಿನಗಳ ಹಿಂದೆ ಉತ್ತರಪ್ರದೇಶದ ಘಾಜಿಯಾಬಾದ್‌ನಲ್ಲಿ ಕೋಮುಸಂಘರ್ಷ ಎಂದು ಬಿಂಬಿಸಲಾದ ಘಟನೆಯೊಂದು ನಡೆದಿತ್ತು. ಅದು ಟ್ವಿಟರ್‌ನಲ್ಲಿ ವ್ಯಾಪಕವಾಗಿ ಪ್ರಚಾರ ಪಡೆದುಕೊಂಡಿತ್ತು. ಈ ಸಂಬಂಧ ಘಾಜಿಯಾಬಾದ್ ಪೊಲೀಸರು, ಟ್ವಿಟರ್‌ನ ಭಾರತೀಯ ಎಂಡಿ ಮನೀಷ್ ಮಹೇಶ್ವರಿಗೆ ಸಮನ್ಸ್ ನೀಡಿದ್ದಾರೆ!
ಸಮನ್ಸ್ ಸ್ವೀಕರಿಸಿದ 7 ದಿನಗಳ ಒಳಗಾಗಿ ಲೋನಿ ಪೊಲೀಸ್ ಠಾಣೆಗೆ ಆಗಮಿಸಿ, ಹೇಳಿಕೆ ನೀಡಬೇಕು ಎಂದು ತಿಳಿಸಿದ್ದಾರೆ. ಇದೇ ಘಟನೆಯಲ್ಲಿ ಕೆಲವು ಪತ್ರಕರ್ತರು, ಕಾಂಗ್ರೆಸ್ ನಾಯಕರು, ಟ್ವಿಟರ್ ಇಂಕ್ ಮತ್ತು ಟ್ವಿಟರ್ ಕಮ್ಯುನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆಗಿದ್ದೇನು?: ಘಾಜಿಯಾಬಾದ್‌ನ ಅಬ್ದುಲ್ ಸಮದ್ ಸೈಫಿ ಎಂಬಾತ, ತನ್ನನ್ನು ವ್ಯಕ್ತಿಯೊಬ್ಬರು ಸುತ್ತಾಡಿಸುತ್ತೇವೆಂದು ಹೇಳಿ ಆಟೋದಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶವೊಂದಕ್ಕೆ ಒಯ್ದು, ಜೈಶ್ರೀರಾಮ್ ಎನ್ನಲು ಒತ್ತಾಯಿಸಿದರು. ಅದಕ್ಕೆ ಒಪ್ಪದಿದ್ದಾಗ ತನ್ನ ಮೇಲೆ ಹಲ್ಲೆ ಮಾಡಿದರು ಎಂದು ಆರೋಪಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದೆ.
ಈ ಹಿನ್ನೆಲೆಯಲ್ಲಿ, ಕೆಲವು ಪತ್ರಕರ್ತರು ಹಾಗೂ ಟ್ವಿಟರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಸಮನ್ಸ್ ಜಾರಿ ಮಾಡಲಾಗಿದೆ.
ಇದನ್ನೂ ಓದಿ :ಯುಪಿ: ಹತ್ರಾಸ್ ಗೆ ತೆರಳುವ ವೇಳೆ ಬಂಧಿಸಲ್ಪಟ್ಟ ಕೇರಳ ಪತ್ರಕರ್ತ ಸಿದ್ಧಿಖ್ ತಾಯಿ ವಿಧಿವಶ
ಇದರ ಬಗ್ಗೆ ಪೊಲೀಸರು ಬೇರೆಯೇ ವಿವರಣೆ ನೀಡಿದ್ದಾರೆ. “ಹಲ್ಲೆ ಮಾಡಿದ್ದು ಆತ ಜೈಶ್ರೀರಾಮ್ ಎನ್ನಲಿಲ್ಲ ಎಂಬ ಕಾರಣಕ್ಕಲ್ಲ. ಹಲ್ಲೆಗೊಳಗಾದ ವ್ಯಕ್ತಿ ನೀಡಿದ್ದ ತಾಯಿತವೊಂದು ಸರಿಯಾಗಿ ಕೆಲಸ ಮಾಡಿಲ್ಲ ಎಂದು ಹಲ್ಲೆಗಾರರಿಗೆ ಅನಿಸಿದ್ದರಿಂದ ಹಾಗಾಗಿದೆ. ಕೋಮುದಳ್ಳುರಿಗೆ ಕಾರಣವಾಗುವ ಇಂತಹ ವಿಡಿಯೊವನ್ನು ಟ್ವಿಟರ್ ವೈರಲ್ ಆಗಲು ಬಿಟ್ಟಿದೆ. ಇದು ಜನರ ನಡುವೆ ದ್ವೇಷವನ್ನು ಹಬ್ಬಿಸುತ್ತದೆ ಎಂದು ಪರಿಗಣಿಸಿಯೇ ಇಲ್ಲ’ ಎಂದು ಪೊಲೀಸರು ಆರೋಪಿಸಿದ್ದಾರೆ.