ಮಳೆ ಬಂದಿಲ್ಲವೆಂದು ಅಧಿಕಾರಿಯೊಬ್ಬರು ಇಂದ್ರ ದೇವನ ವಿರುದ್ಧವೇ ಕ್ರಮಕ್ಕೆ ಆದೇಶಿಸಿದ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಗೊಂಡಾ ಜಿಲ್ಲೆಯ ಆದಾಯ ಇಲಾಖೆಯ ಹಿರಿಯ ಅಧಿಕಾರಿ ಎನ್.ಎನ್. ವರ್ಮಾ ಈ ರೀತಿ ಆದೇಶಿಸಿದವರು.
ಜಿಲ್ಲೆಯಲ್ಲಿ ನಡೆದ “ಸಮಾಧಾನ ದಿವಸ್’ ಕಾರ್ಯಕ್ರಮದಲ್ಲಿ ಸುಮಿತ್ ಕುಮಾರ್ ಯಾದವ್ ಹೆಸರಿನ ರೈತರೊಬ್ಬರು ವರ್ಮಾ ಅವರಿಗೆ ದೂರು ಪತ್ರ ಸಲ್ಲಿಸಿದ್ದಾರೆ.
“ಜಿಲ್ಲೆಯಲ್ಲಿ ಮಳೆಯಾಗಿಲ್ಲ. ಇದರಿಂದಾಗಿ ಬೆಳೆ ಹಾನಿಯಾಗಿದೆ. ಇದಕ್ಕೆ ಕಾರಣವಾದ ಮಳೆಯ ದೇವತೆ ಇಂದ್ರನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಪತ್ರದಲ್ಲಿ ಬರೆಯಲಾಗಿದೆ.
ಈ ಪತ್ರಕ್ಕೆ ವರ್ಮಾ ಅವರು ಸಹಿ ಹಾಕಿ, ಬೇರೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ವರ್ಮಾ ಅವರು, ನಾನು ಈ ರೀತಿಯ ಪತ್ರಕ್ಕೆ ಸಹಿ ಹಾಕಿಯೇ ಇಲ್ಲ ಎಂದು ಹೇಳಿಕೊಂಡಿದ್ದಾರೆ.