ಲಕ್ನೋ: ‘ಮತದಾನ ಮಾಡುವ ವೇಳೆ ನೀವು ತಪ್ಪು ಮಾಡಿದರೆ ಉತ್ತರ ಪ್ರದೇಶವು ಕಾಶ್ಮೀರ, ಬಂಗಾಳ ಮತ್ತು ಕೇರಳದಂತೆ ಆಗಬಹುದು” ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮತದಾರರಲ್ಲಿ ಮನವಿ ಮಾಡಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಯೋಗಿ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಉತ್ತರ ಪ್ರದೇಶ ಬಿಜೆಪಿಯು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಯೋಗಿ ಆದಿತ್ಯನಾಥ್ ಅವರು ಬಿಜೆಪಿಗೆ ಮತ ಹಾಕಿದರೆ “ಭಯಮುಕ್ತ ಜೀವನ ಗ್ಯಾರಂಟಿ” ಎಂದು ಹೇಳಿದ್ದಾರೆ.
“ನನ್ನ ಹೃದಯದಿಂದ ಈ ಮಾತುಗಳನ್ನು ಹೇಳುತ್ತಿದ್ದೇನೆ, ಕಳೆದ ಐದು ವರ್ಷಗಳಲ್ಲಿ ಹಲವು ಉತ್ತಮ ಕೆಲಸಗಳಾಗಿದೆ. ಒಂದು ವೇಳೆ ನೀವು ಬಾರಿ ತಪ್ಪಿದರೆ, ಈ ಎಲ್ಲಾ ಕೆಲಸಗಳು ಹಾಳಾಗಬಹುದು. ಹೀಗಾದಲ್ಲಿ ಉತ್ತರ ಪ್ರದೇಶವು ಕಾಶ್ಮೀರ, ಕೇರಳ, ಬಂಗಾಳ ನಂತೆ ಆಗಬಹುದು” ಎಂದು ಯೋಗಿ ಹೇಳಿದರು.
ಇದನ್ನೂ ಓದಿ:ಹಿಜಾಬ್ ವಿವಾದ: ಭಾರತೀಯ ಚಾರ್ಜ್ ಡಿ’ಅಫೇರ್‌ಗಳಿಗೆ ಸಮನ್ಸ್ ನೀಡಿದ ಪಾಕಿಸ್ಥಾನ!
“ನಿಮ್ಮ ಮತಗಳು ನನ್ನ ಐದು ವರ್ಷದ ಕೆಲಸಕ್ಕೆ ಆಶೀರ್ವಾದ ಇದ್ದಂತೆ, ನಿಮ್ಮ ಮತಗಳು ನಿಮ್ಮ ಐದು ವರ್ಷಗಳ ಭಯಮುಕ್ತ ಜೀವನಕ್ಕೆ ಗ್ಯಾರಂಟಿ” ಎಂದರು.
ಉತ್ತರ ಪ್ರದೇಶದ ಪಶ್ಚಿಮ ಭಾಗದ 58 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ. ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.