ಲಕ್ನೋ: ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಾಲ್ಕು ದಿನಗಳ ಹಿಂದೆ ತನ್ನ 40 ವರ್ಷದ ಪತ್ನಿಯನ್ನು ಅಂತ್ಯಸಂಸ್ಕಾರ ಮಾಡಿದ ಬಳಿಕ ವ್ಯಕ್ತಿಯೊಬ್ಬನಿಗೆ ಆಕೆ 600 ಕಿಲೋಮೀಟರ್ ದೂರದಲ್ಲಿರುವ ಝಾನ್ಸಿಯಲ್ಲಿ ಜೀವಂತವಾಗಿ ಪತ್ತೆಯಾದ ನಂತರ ಮತ್ತೆ ಒಂದಾದ ನಿಗೂಢ, ಕುತೂಹಲಕಾರಿ ಘಟನೆ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಗೋರಖ್‌ಪುರದ ಬನ್ಸ್‌ಗಾಂವ್‌ನ ನಿವಾಸಿ ರಾಮ್ ಸುಮೇರ್ (60) ಅವರು ತಮ್ಮ ಪತ್ನಿ ಫೂಲ್ಮತಿ ಜೂನ್ 15 ರಂದು ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದ. ನಾಲ್ಕು ದಿನಗಳ ನಂತರ, ಜೂನ್ 19 ರಂದು ಉರುವಾ ಬಜಾರ್ ಪ್ರದೇಶದಲ್ಲಿ ಮಹಿಳೆಯ ಶವವೊಂದು ಪತ್ತೆಯಾಗಿತ್ತು. ಸುಮೇರ್ ಶವವನ್ನು ತನ್ನ ಹೆಂಡತಿಯೆಂದು ಗುರುತಿಸಿ ಅಂತಿಮ ವಿಧಿಗಳನ್ನು ಪೂರ್ಣಗೊಳಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಆಕೆಯ ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆಯನ್ನು ಕತ್ತು ಹಿಸುಕಿ ಸಾಯಿಸಲಾಗಿದೆ ಎಂದು ಬಹಿರಂಗಪಡಿಸಿದ ನಂತರ ಪ್ರಕರಣವು ನಿಗೂಢ ತಿರುವು ಪಡೆದುಕೊಂಡಿದ್ದು, ಹೆಚ್ಚಿನ ತನಿಖೆಯನ್ನು ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಂಕಿತ ಹಂತಕನನ್ನು ಹಿಡಿಯಲು, ಪೊಲೀಸರು ಫೂಲ್ಮತಿಯ ಮೊಬೈಲ್ ಫೋನ್ ಅನ್ನು ಪತ್ತೆಹಚ್ಚಿದರು, ಅದು ಝಾನ್ಸಿಯಲ್ಲಿ ಸುಮಾರು 600 ಕಿಲೋಮೀಟರ್ ದೂರದಲ್ಲಿ ಸಕ್ರಿಯವಾಗಿತ್ತು. ಕರೆ ದಾಖಲೆಗಳು ಫೂಲ್ಮತಿ ಮತ್ತು ಸುಲ್ತಾನ್‌ಪುರದ ಶುಭಂ ಎಂಬುವವರ ನಡುವೆ ಆಗಾಗ್ಗೆ ಸಂವಹನ ನಡೆಸುತ್ತಿದ್ದವು. ವಿಚಾರಣೆ ನಡೆಸಿದಾಗ ಫೂಲ್ಮತಿ ಬದುಕಿದ್ದು, ಆಕೆಯನ್ನು ಝಾನ್ಸಿ ಬಳಿ ಕರೆತಂದಿರುವುದಾಗಿ ಶುಭಂ ಪೊಲೀಸರಿಗೆ ತಿಳಿಸಿದ್ದಾನೆ.ನಂತರ ಪೊಲೀಸರು ಆಕೆಯನ್ನು ಶುಭಂ ನೀಡಿದ ವಿಳಾಸದಲ್ಲಿ ಪತ್ತೆ ಹಚ್ಚಿದ್ದಾರೆ.
ಫೂಲ್ಮತಿ ತನ್ನ ತವರು ಮನೆಯಿಂದ ಜೂನ್ 15 ರಂದು ತನ್ನ ಮನೆಗೆ ಹೋಗಿದ್ದಳು ಆದರೆ ಬಂದಿರಲಿಲ್ಲ ಎಂದು ಸುಮೇರ್ ಪೊಲೀಸರಿಗೆ ತಿಳಿಸಿದ್ದಾನೆ. ವ್ಯಾಪಕ ಹುಡುಕಾಟದ ನಂತರ ಕಾಣೆಯಾಗಿರುವುದಾಗಿ ದೂರು ನೀಡಿದ್ದ.
ಮಹಿಳೆಯ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಶನಿವಾರ ಆಕೆಯನ್ನು ಆಕೆಯ ಪತಿಯೊಂದಿಗೆ ವಾಪಸ್ ಕಳುಹಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ತೋಮರ್ ತಿಳಿಸಿದ್ದಾರೆ.
ಸದ್ಯ ಸುಮೇರ್, ಫೂಲ್ಮತಿ, ಶುಭಂ ಮತ್ತು ಶವಸಂಸ್ಕಾರವಾಗಿ ಹೋಗಿರುವ ಮೃತ ಮಹಿಳೆ ಯಾರು, ಇವರ ನಡುವಿನ ಸಂಪರ್ಕವನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ. ಬಾಲಕನೊಬ್ಬ ಅನುಮಾನಾಸ್ಪದವಾಗಿ ಚಲಿಸುತ್ತಿರುವ ಸಿಸಿಟಿವಿ ಕೆಮೆರಾ ದೃಶ್ಯಾವಳಿಗಳನ್ನು ಪೊಲೀಸರು ಪಡೆದುಕೊಂಡಿದ್ದು, ಪ್ರಕರಣವನ್ನು ಹೊಸ ಕೋನದಲ್ಲಿ ಮರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.