ಲಕ್ನೋ: ಬಟ್ಟೆ ಖರೀದಿಸುವ ವೇಳೆ ವ್ಯಕ್ತಿಯೊಬ್ಬ ಅಂಗಡಿ ಮಾಲೀಕನ ಜೊತೆ ವಾಗ್ವಾದವನ್ನು ನಡೆಸಿ ಆತನ ಬೆರಳುಗಳನ್ನು ಕಚ್ಚಿರುವ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ನಡೆದಿದೆ.
ಗಾರ್ಮೆಂಟ್ ಅಂಗಡಿಯೊಂದರಲ್ಲಿ ಬಟ್ಟೆಗಳನ್ನು ಮಾರಾಟ ಮಾಡುವ ಶಿವಚಂದ್ರ ಕಾರವಾರಿಯಾ ಅವರ ಅಂಗಡಿಗೆ ವ್ಯಕ್ತಿಯೊಬ್ಬ ಫ್ರಾಕ್ ಖರೀದಿಸಲು ಬಂದಿದ್ದಾನೆ. ಗ್ರಾಹಕ ಫ್ರಾಕ್ ಖರೀದಿ ಮಾಡಿ ಆ ದಿನ ವಾಪಾಸ್ ಹೋಗಿದ್ದಾನೆ.
ಮರುದಿನ ಅದೇ ಗ್ರಾಹಕ ವಾಪಾಸ್ ಬಂದು, ನಿನ್ನೆ ಖರೀದಿಸಿದ ಫ್ರಾಕ್ ಸಣ್ಣದಾಗುತ್ತದೆ. ತನಗೆ ದೊಡ್ಡ ಸೈಜ್ ವುಳ್ಳ ಫ್ರಾಕ್ ಬೇಕೆಂದು ಶಿವಚಂದ್ರ ಅವರ ಬಳಿ ಕೇಳಿದ್ದಾನೆ. ಈ ವೇಳೆ ಶಿವಚಂದ್ರ ಅವರು ದೊಡ್ಡ ಸೈಜ್ ನ ಫ್ರಾಕ್ ಗೆ 50 ರೂಪಾಯಿ ಹೆಚ್ಚಗೆ ನೀಡಬೇಕೆಂದು ಹೇಳಿದ್ದಾರೆ. ಆದರೆ ಇದಕ್ಕೆ ಗ್ರಾಹಕ ಗರಂ ಆಗಿದ್ದಾರೆ. 50 ರೂಪಾಯಿ ಹೆಚ್ಚು ಪಾವತಿಸುವುದಿಲ್ಲ ಎಂದಿದ್ದಾರೆ. ಗ್ರಾಹಕ ಹಾಗೂ ಮಾಲೀಕನ ನಡುವೆ ವಾಗ್ವಾದ ನಡೆದು, ಗ್ರಾಹಕ ಮಾಲೀಕನ ಬೆರಳುಗಳನ್ನು ಕಚ್ಚಿ ಗಾಯಗೊಳಿಸಿದ್ದಾನೆ. ಪಕ್ಕದಲ್ಲಿದ್ದ ಮಾಲೀಕನ ಮಗನಿಗೂ ಕಚ್ಚಿದ್ದಾನೆ. ಅಂಗಡಿಯಿಂದ ವಾಪಾಸ್ ಹೋಗುವ ವೇಳೆ ಬಟ್ಟೆಗಳನ್ನು ಎಸೆದು ಮಾಲೀಕನಿಗೆ ಬೆದರಿಕೆಯನ್ನು ಹಾಕಿದ್ದಾರೆ.
ಗಾಯಗೊಂಡ ಕಾರವಾರಿಯಾ ಸಮೀಪದ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ.
ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ಆತನನ್ನು ಬಂಧಿಸಿದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸುರೇಶ್ ಸೈನಿ ತಿಳಿಸಿದ್ದಾರೆ.