ಲಕ್ನೋ: ನಿಮ್ಮ ಖಾತೆಯಲ್ಲಿ ಸುಮಾರು 54 ಕೋಟಿ ರೂಪಾಯಿ ಹಣದ ವಹಿವಾಟು ನಡೆದಿದ್ದು, ಈ ಬಗ್ಗೆ ವಿವರಣೆ ನೀಡಬೇಕು…ಇದು ಉತ್ತರಪ್ರದೇಶದ ಶಾಮ್ಲಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೋಮ್ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಗೆ ದೆಹಲಿಯ ಆದಾಯ ತೆರಿಗೆ ಇಲಾಖೆ ನೋಟಿಸ್ ಕಳುಹಿಸಿ ಮಾಹಿತಿ ನೀಡುವಂತೆ ಸೂಚಿಸಿರುವ ಘಟನೆ ವರದಿಯಾಗಿದೆ.
ಇದನ್ನೂ ಓದಿ:Stolen: ಕಂಪೆನಿಯವರ ಸೋಗಿನಲ್ಲಿ ಬಂದು ಮೊಬೈಲ್ ಟವರನ್ನೇ ಕಳ್ಳತನ ಮಾಡಿಕೊಂಡು ಹೋದ ಗ್ಯಾಂಗ್!
ಆದಾಯ ತೆರಿಗೆ ಇಲಾಖೆ ಕಳುಹಿಸಿರುವ ನೋಟಿಸ್ ನಿಂದ ಕಂಗಾಲಾಗಿರುವ ಹೋಮ್ ಗಾರ್ಡ್, ಇಷ್ಟೊಂದು ದೊಡ್ಡ ಮೊತ್ತದ ಹಣದ ವಹಿವಾಟು ನಡೆದಿರುವುದು ತನ್ನ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದು, ಈ ಬಗ್ಗೆ ನ್ಯಾಯ ದೊರಕಿಸಿಕೊಡುವಂತೆ ಕೋರಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿರುವುದಾಗಿ ವರದಿ ವಿವರಿಸಿದೆ.
ಕುಂಡಾನಾ ಗ್ರಾಮದ ನಿವಾಸಿಯಾಗಿರುವ ಸೋಮ್ ಪಾಲ್, ಪ್ರಸ್ತುತ ಲಕ್ನೋದಲ್ಲಿ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಕಚೇರಿಯಲ್ಲಿ ಹೋಮ್ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಏಪ್ರಿಲ್ 9ರಂದು ತನಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದಿರುವುದಾಗಿ ಸೋಮ್ ಪಾಲ್ ಜಿಲ್ಲಾಧಿಕಾರಿ ರವಿ ಸಿಂಗ್ ಅವರನ್ನು ಭೇಟಿಯಾಗಿ, ವಿವರಣೆ ನೀಡಿದ್ದಾರೆ.
2018ರಿಂದ ಸೋಮ್ ಪಾಲ್ ಖಾತೆಯ ಮೂಲಕ ಸುಮಾರು 54 ಕೋಟಿ ರೂಪಾಯಿ ವಹಿವಾಟು ನಡೆದಿದ್ದು, ಭಾರೀ ಮೊತ್ತದ ಹಣದ ವಹಿವಾಟಿಗೆ ಯಾವುದೇ ಆದಾಯ ತೆರಿಗೆ ಪಾವತಿಸಿಲ್ಲ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
ತಾನು ಎರಡು ಬ್ಯಾಂಕ್ ಖಾತೆಗಳನ್ನು ಹೊಂದಿರುವುದಾಗಿ ತಿಳಿಸಿರುವ ಸೋಮ್ ಪಾಲ್, ಒಂದು ಹೋಮ್ ಗಾರ್ಡ್ ಇಲಾಖೆಯ ಸಂಬಳದ ಖಾತೆ ಹಾಗೂ ಮತ್ತೊಂದು ಕೃಷಿಗೆ ಸಂಬಂಧಿಸಿದ ಖಾತೆಯಾಗಿದೆ ಎಂದು ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.