ಲಕ್ನೋ:ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದ್ದ ಹತ್ರಾಸ್ ದಲಿತ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹತ್ರಾಸ್ ಸಂತ್ರಸ್ತೆಯನ್ನು ಮಧ್ಯರಾತ್ರಿ ತರಾತುರಿಯಲ್ಲಿ ಶವಸಂಸ್ಕಾರ ನಡೆಸಿ ಸುಟ್ಟುಹಾಕಿರುವುದು ಯಾಕೆ ಎಂಬ ಬಗ್ಗೆ ಉತ್ತರಪ್ರದೇಶ ಸರ್ಕಾರ ಸುಪ್ರೀಂಕೋರ್ಟ್ ಗೆ ಮಂಗಳವಾರ (ಸೆಪ್ಟೆಂಬರ್ 6) ಮಾಹಿತಿ ನೀಡಿದೆ.
“ಭಾರೀ ದೊಡ್ಡ ಮಟ್ಟದ ಹಿಂಸಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ದಲಿತ ಯುವತಿ ಶವದ ಅಂತ್ಯಸಂಸ್ಕಾರವನ್ನು ಮಧ್ಯರಾತ್ರಿ ನಡೆಸಿರುವುದಾಗಿ ಉತ್ತರಪ್ರದೇಶ ಸರ್ಕಾರ ಹೇಳಿದೆ. ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಅಫಿಡವಿತ್ ನಲ್ಲಿ, ಅಸಾಧಾರಣ ಸನ್ನಿವೇಶದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಂತ್ರಸ್ತೆ ಕುಟುಂಬ ಸದಸ್ಯರ ಒಪ್ಪಿಗೆ ಮೇರೆಗೆ ರಾತ್ರಿಯೇ ಅಂತ್ಯಸಂಸ್ಕಾರ ನಡೆಸಿರುವುದಾಗಿ ವಿವರಿಸಿದೆ.
ಸಫ್ದರ್ ಜಂಗ್ ಆಸ್ಪತ್ರೆ ಆವರಣದಲ್ಲಿ ಧರಣಿ, ಪ್ರತಿಭಟನೆ ನಡೆಯುತ್ತಿದ್ದ ಪರಿಣಾಮ ಸೆಪ್ಟೆಂಬರ್ 29ರಂದು ಬೆಳಗ್ಗೆಯಿಂದ ಹತ್ರಾಸ್ ಜಿಲ್ಲಾಡಳಿತಕ್ಕೆ ಗುಪ್ತಚರ ಇಲಾಖೆ ಹಲವು ಮಾಹಿತಿಯನ್ನು ನೀಡಿತ್ತು. ಇಡೀ ಪ್ರಕರಣಕ್ಕೆ ಜಾತಿಯ ಬಣ್ಣ ಹಚ್ಚಿ, ಕೋಮು ದಳ್ಳುರಿ ಎಬ್ಬಿಸುವ ಹುನ್ನಾರ ನಡೆಸಲು ಸಂಚು ರೂಪಿಸಿದ್ದ ಮಾಹಿತಿ ಲಭ್ಯವಾಗಿರುವುದಾಗಿ ಉತ್ತರ ಪ್ರದೇಶ ಸರ್ಕಾರ ಮಾಹಿತಿ ನೀಡಿದೆ.
ಇದನ್ನೂ ಓದಿ:ಮಾರ್ಷಲ್ ಗಳಿಂದ ‘ಮಾಸ್ಕ್’ ದಂಡ: ದಂಡ ಕಟ್ಟಲು ಹಣವಿಲ್ಲವೆಂದು ಕಣ್ಣೀರಿಟ್ಟ ಯುವಕ
ಹತ್ರಾಸ್ ಗ್ರಾಮದಲ್ಲಿ ಸೆ.30ರ ಬೆಳಗ್ಗೆ ಭಾರೀ ಪ್ರಮಾಣದಲ್ಲಿ ವಿವಿಧ ರಾಜಕೀಯ ಪಕ್ಷಗಳು ಮುಖಂಡರು, ಕಾರ್ಯಕರ್ತರು, ವಿವಿಧ ಜಾತಿ ಸಂಘಟನೆಯ ಮುಖಂಡರು, ಮಾಧ್ಯಮದವರು ಸೇರಲಿದ್ದಾರೆ ಎಂಬ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿರುವುದಾಗಿ ಸರ್ಕಾರ ಹೇಳಿದೆ.