ಲಕ್ನೋ: ಖಾಸಗಿ ಆಸ್ಪತ್ರೆಯ ವೈದ್ಯನೊಬ್ಬ 17 ವರ್ಷದ ಹುಡುಗಿಯೊಬ್ಬಳಿಗೆ ಕಾಯಿಲೆಗೆ ಸಂಬಂಧಪಡದ (Wrong) ಇಂಜೆಕ್ಷನ್ ನೀಡಿದ ಪರಿಣಾಮ ಕೊನೆಯುಸಿರೆಳೆದಿರುವ ಘಟನೆ ಉತ್ತರಪ್ರದೇಶದ ಮೈನ್ ಪುರಿಯಲ್ಲಿ ನಡೆದಿದೆ.
ಇದನ್ನೂ ಓದಿ:Illicit ಸಂಬಂಧ; ವಿವಾಹಿತೆಗೆ ಬ್ಲಾಕ್ ಮೇಲ್: ಸುಬ್ರಹ್ಮಣ್ಯ ಗ್ರಾ.ಪಂ.ಮಾಜಿ ಸದಸ್ಯ ಅರೆಸ್ಟ್
“ನಮ್ಮ ಮಗಳು ಸಾವನ್ನಪ್ಪಿದ್ದಾಳೆ ಎಂಬ ವಿಷಯವನ್ನೂ ತಿಳಿಸದೇ ಆಸ್ಪತ್ರೆಯ ಸಿಬಂದಿ ಹೊರಗಿನ ಪಾರ್ಕಿಂಗ್ ಸ್ಥಳದಲ್ಲಿದ್ದ ಮೋಟಾರ್ ಸೈಕಲ್ ಮೇಲೆ ಶವವನ್ನು ಇರಿಸಿ ಪರಾರಿಯಾಗಿದ್ದರು” ಎಂದು ಪೋಷಕರು ಆರೋಪಿಸಿದ್ದಾರೆ.
ಘಟನೆಯ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಸಾರ್ವಜನಿಕರ ಆಕ್ರೋಶದ ಭಯಕ್ಕೆ ಹೆದರಿ ವೈದ್ಯರು ಮತ್ತು ಆಸ್ಪತ್ರೆಯ ಎಲ್ಲಾ ಸಿಬಂದಿಗಳು ಓಡಿಹೋಗಿರುವುದಾಗಿ ವರದಿ ತಿಳಿಸಿದೆ. ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿದ್ದ ಬೈಕ್ ಮೇಲೆ ಬಾಲಕಿಯ ಶವ ಅನಾಥವಾಗಿರುವಂತೆ ಬಿದ್ದಿರುವುದು ಸಿಸಿಟಿವಿಯಲ್ಲಿ ದಾಖಲಾಗಿರುವುದಾಗಿ ವರದಿ ತಿಳಿಸಿದೆ.
ಜ್ವರದಿಂದ ಬಳಲುತ್ತಿದ್ದ ಭಾರ್ತಿ(17ವರ್ಷ)ಯನ್ನು ಪೋಷಕರು ಘಿರೋರ್ ಪ್ರದೇಶದ ಕರ್ಹಾಲ್ ರಸ್ತೆಯಲ್ಲಿರುವ ರಾಧಾ ಸ್ವಾಮಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ಆಕೆಯ ಚಿಕ್ಕಮ್ಮ ಮನೀಶಾ ತಿಳಿಸಿದ್ದಾರೆ. ಆಕೆ ಆರೋಗ್ಯವಾಗಿಯೇ ಇದ್ದಳು. ಆಕೆಯನ್ನು ಪರೀಕ್ಷಿಸಿದ ವೈದ್ಯರು ಇಂಜೆಕ್ಷನ್ ನೀಡಿದ್ದರು. ಬಳಿಕ ಆಕೆಯ ಆರೋಗ್ಯ ತೀವ್ರ ಹದಗೆಟ್ಟಿತ್ತು. ನೀವು ಆಕೆಯನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ವೈದ್ಯ ತಿಳಿಸಿದ್ದ. ಆದರೆ ಆ ಸಮಯಕ್ಕೆ ಭಾರ್ತಿ ಕೊನೆಯುಸಿರೆಳೆದಿದ್ದಳು ಎಂದು ಮನೀಶಾ ವಿವರಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಗೆ ಬೀಗ ಹಾಕುವಂತೆ ಜಿಲ್ಲಾ ವೈದ್ಯಾಧಿಕಾರಿ ಆದೇಶ ನೀಡಿದ್ದಾರೆ. ಆರೋಪಿ ವೈದ್ಯನ ವಿರುದ್ಧ ಎಫ್ ಐಆರ್ ದಾಖಲಿಸಿ, ಆಸ್ಪತ್ರೆಯ ರಿಜಿಸ್ಟ್ರೇಶನ್ ರದ್ದುಪಡಿಸಲಾಗುವುದು ಎಂದು ಸಿಎಂಒ ಗುಪ್ತಾ ತಿಳಿಸಿದ್ದಾರೆ.