ಲಕ್ನೋ : ನಗರದ ಸಿವಿಲ್ ಕೋರ್ಟ್ ಆವರಣದಲ್ಲಿ ಕುಖ್ಯಾತ ದರೋಡೆಕೋರ ಸಂಜೀವ್ ಮಹೇಶ್ವರಿ ಅಲಿಯಾಸ್ ‘ಜೀವಾ’ ಎಂಬಾತನನ್ನು ಬುಧವಾರ ಹಾಡ ಹಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ವಾಯವ್ಯ ಉತ್ತರ ಪ್ರದೇಶದ ಮುಜಾಫರ್‌ನಗರ ಮೂಲದ ಜೀವಾನನ್ನು 2006 ರಲ್ಲಿ ಬಿಜೆಪಿ ಶಾಸಕ ಕೃಷ್ಣಾನಂದ ರಾಯ್ ಮತ್ತು ಯುಪಿ ಮಾಜಿ ಸಚಿವ ಬ್ರಹ್ಮದತ್ ದ್ವಿವೇದಿ ಹತ್ಯೆಗೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.
ದ್ವಿವೇದಿ ಹತ್ಯೆ ಪ್ರಕರಣದಲ್ಲಿ ಜೀವಾ ಮತ್ತು ಸಮಾಜವಾದಿ ಪಕ್ಷದ ಮಾಜಿ ಶಾಸಕ ವಿಜಯ್ ಸಿಂಗ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಜೀವಾ ಇತರ ನಾಲ್ಕು ಕೊಲೆಗಳಲ್ಲಿಯೂ ನಂಟು ಹೊಂದಿದ್ದ.
ಕೃಷ್ಣಾನಂದ ರಾಯ್ ಹತ್ಯೆಯಲ್ಲಿ ಜೀವಾ ಹೊರತುಪಡಿಸಿ ಅನ್ಸಾರಿ ಸಹೋದರರ (ಸಮಾಜವಾದಿ ಪಕ್ಷದ ಸಂಸದ ಅಫ್ಜಲ್ ಅನ್ಸಾರಿ ಮತ್ತು ಶಾಸಕ ಮುಖ್ತಾರ್ ಅನ್ಸಾರಿ), ಅವರ ಸಂಬಂಧಿ ಎಜಾಜ್ ಅನ್ಸಾರಿ, ರಾಯ್ ಬರೇಲಿಯ ಫಿರ್ದೌಸ್ ಮತ್ತು ಮುನ್ನಾ ಬಜರಂಗಿ ಅವರ ಹೆಸರಿದೆ. ಮೂಲಗಳ ಪ್ರಕಾರ, ಪ್ರಕರಣದಲ್ಲಿ ಸಂಜೀವ್ ಮಹೇಶ್ವರಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯಲಾಗಿತ್ತು.
ವಕೀಲರ ವೇಷದಲ್ಲಿದ್ದ ದಾಳಿಕೋರನನ್ನು ಪೊಲೀಸರು ಬಂಧಿಸಿದ್ದಾರೆ. ದಾಳಿಕೋರ ಆರು ಸುತ್ತು ಗುಂಡು ಹಾರಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ದಾಳಿಯಲ್ಲಿ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗಾಯಾಳುವನ್ನು ಚಿಕಿತ್ಸೆಗಾಗಿ ಟ್ರಾಮಾ ಸೆಂಟರ್‌ಗೆ ಸ್ಥಳಾಂತರಿಸಲಾಗಿದೆ ಎಂದು ಲಕ್ನೋ ಪೊಲೀಸರು ತಿಳಿಸಿದ್ದಾರೆ.
‘ಜೀವಾ’ ವಿರುದ್ಧ 22ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಈತ ಮುಖ್ತಾರ್ ಅನ್ಸಾರಿಗೆ ಆಪ್ತನಾಗಿದ್ದ ಎನ್ನಲಾಗಿದೆ.
ಅಖಿಲೇಶ್ ಆಕ್ರೋಶ
ಘಟನೆಯ ಕುರಿತು ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಲಕ್ನೋ ಅತ್ಯಂತ “ಅಸುರಕ್ಷಿತ ನಗರ” ಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. ನಗರವು ಮಹಿಳೆಯರಿಗೆ ಅತ್ಯಂತ ಅಸುರಕ್ಷಿತವಾಗಿದೆ ಎಂದು ಹೇಳಿದರು. ಲಕ್ನೋದಲ್ಲಿ ಹೆಚ್ಚುತ್ತಿರುವ ಅಪರಾಧಗಳ ಕುರಿತು ಅವರು ಪೊಲೀಸರನ್ನು ಪ್ರಶ್ನಿಸಿ ಆಕ್ರೋಶ ಹೊರ ಹಾಕಿದ್ದಾರೆ.