ಲಕ್ನೋ: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ 7ನೇ ಹಾಗೂ ಅಂತಿಮ ಹಂತದಲ್ಲಿ ಶೇ.60.03ರಷ್ಟು ಮತದಾನವಾಗಿದ್ದು, ಮಣಿಪುರದ 2ನೇ ಹಾಗೂ ಅಂತಿಮ ಹಂತದದಲ್ಲಿ ಶೇ.86ರಷ್ಟು ಮತದಾನವಾಗಿದೆ.
ಉತ್ತರಪ್ರದೇಶದ 7ಹಂತದ ಮತದಾನ ಮುಕ್ತಾಯವಾಗುವ ಮೂಲಕ ಹೈವೋಲ್ಟೇಜ್ ಚುನಾವಣೆಯ ಮತದಾನ ಪ್ರಕ್ರಿಯೆ ಕೊನೆಗೊಂಡಿದ್ದು, ಯುಪಿ, ಮಣಿಪುರ್, ಉತ್ತರಾಖಂಡ್, ಗೋವಾ ಹಾಗೂ ಪಂಜಾಬ್ ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಮಾರ್ಚ್ 11ರಂದು ಪಂಚರಾಜ್ಯಗಳ ಚುನಾವಣಾ ಭವಿಷ್ಯ ಬಹಿರಂಗವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುತ್ತಿರುವ ವಾರಣಾಸಿ ಲೋಕಸಭಾ ಕ್ಷೇತ್ರ ಸೇರಿದಂತೆ ಬುಧವಾರ 40 ಕ್ಷೇತ್ರಗಳಿಗೆ ಅಂತಿಮ ಸುತ್ತಿನ ಮತದಾನ ನಡೆಯಿತು. ನಕ್ಸಲ್ ಬಾಧಿತ ಡುಡ್ಡಿ, ರೋಬಸ್ಟಾಗಂಜ್ ಮತ್ತು ಛಾಕ್ರಿ ಕ್ಷೇತ್ರದಲ್ಲಿ 4ಗಂಟೆಗೆ ಮತದಾನ ಮುಕ್ತಾಯವಾಗಿದ್ದರೆ, ಉಳಿದ ಕ್ಷೇತ್ರಗಳಿಗೆ 5ಗಂಟೆವರೆಗೆ ಮತದಾನ ನಡೆದಿತ್ತು.
ಪಂಚ ರಾಜ್ಯಗಳ ಚುನಾವಣೆ ಹೈವೋಲ್ಟೇಜ್ ಮಿನಿ ಸಮರವಾಗಿದ್ದು, ಆಡಳಿತಾರೂಢ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದರೆ, ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳಿಗೆ ಸವಾಲಿನದ್ದಾಗಿದೆ. ಉತ್ತರಪ್ರದೇಶ ಹಾಗೂ ಮಣಿಪುರದಲ್ಲಿನ ಅಂತಿಮ ಹಂತದ ಮತದಾನ ಮುಗಿಯುವ ಮೂಲಕ ಎಲ್ಲಾ ಅಭ್ಯರ್ಥಿಗಳ ಹಣೆಬರಹ ಮತಯಂತ್ರದಲ್ಲಿ ಭದ್ರವಾಗಿದೆ. ಮಾ.11ಕ್ಕೆ ಫಲಿತಾಂಶ ಹೊರಬೀಳಲಿದ್ದು, ಕ್ಷಣಗಣನೆ ಆರಂಭವಾಗಿದೆ.
ಗೆಲುವು ಯಾರಿಗೆ?
ಈಗಾಗಲೇ ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ್ ಹಾಗೂ ಮಣಿಪುರದಲ್ಲಿ ಗೆಲುವು ಯಾರಿಗೆ ಎಂಬ ಲೆಕ್ಕಾಚಾರ ಆರಂಭವಾಗಿದೆ. ಬೆಟ್ಟಿಂಗ್ ದಂಧೆಯೂ ಭರ್ಜರಿಯಾಗಿ ನಡೆಯುತ್ತಿದ್ದು, ಪಂಚ ರಾಜ್ಯಗಳ ಫಲಿತಾಂಶ ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದು, ಮಾ.11ಕ್ಕೆ ತೆರೆಬೀಳಲಿದೆ.