ಹೊಸದಿಲ್ಲಿ : ಪಂಚ ರಾಜ್ಯಗಳ ಚುನಾವಣೆ ಬಳಿಕವೇ ಬಜೆಟ್ ಮಂಡಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖೀಲೇಶ್ ಯಾದವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಪಂಚ ರಾಜ್ಯ ಚುನಾವಣೆಗೆ ಮೊದಲು ಬಜೆಟ್ ಮಂಡಿಸಿದಲ್ಲಿ ಈ ರಾಜ್ಯಗಳಿಗೆ ಅನುಕೂಲ ಉಂಟಾಗಬಲ್ಲ ಯೋಜನೆಗಳು ತಪ್ಪಿಹೋಗಬಹುದು; ಮತ್ತು ಈ ರಾಜ್ಯಗಳ ಜನರಿಗೆ ಅಂತಹ ಉತ್ತಮ ಯೋಜನೆಗಳಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ಅಖೀಲೇಶ್ ಯಾದವ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಫೆ.1ರಂದು ಮಂಡಿಸಲ್ಪಡುವ ಕೇಂದ್ರ ಬಜೆಟ್ ವೇಳಾ ಪಟ್ಟಿಯಲ್ಲಿ ತಾನು ಹಸ್ತಕ್ಷೇಪ ನಡೆಸೆನೆಂದು ಸುಪ್ರೀಂ ಕೋರ್ಟ್ ಈಗಾಗಲೇ ಸ್ಪಷ್ಟಪಡಿಸಿದೆ.
ಇದಕ್ಕೆ ಮೊದಲು ಚುನಾವಣಾ ಆಯೋಗವು, ಪಂಚ ರಾಜ್ಯ ಚುನಾವಣೆಗೆ ಮುನ್ನ ಮಂಡಿಸಲ್ಪಡುವ ಕೇಂದ್ರ ಬಜೆಟ್‌ನಲ್ಲಿ ಆ ಐದು ರಾಜ್ಯಗಳಿಗೆ ಸಂಬಂಧಿಸಿದಂತೆ ಯಾವುದೇ ವಿಶೇಷ ಯೋಜನೆಗಳನ್ನು ಘೋಷಿಸಕೂಡದು ಎನ್ನುವ ನಿರ್ಬಂಧವನ್ನು ಸರಕಾರಕ್ಕೆ ವಿಧಿಸಿದೆ.
ಕಾಂಗ್ರೆಸ್ ಮಾತ್ರವಲ್ಲದೆ ಇನ್ನೂ ಅನೇಕ ಪಕ್ಷಗಳು ಪಂಚ ರಾಜ್ಯ ಚುನಾವಣೆಯ ಬಳಿಕವೇ ಬಜೆಟ್ ಮಂಡಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದವು.