ಲಕ್ನೋ: ರಾಜಭವನ ಬಳಿಯ ರಸ್ತೆಯಲ್ಲಿಯೇ ನಾಲ್ಕೂವರೆ ತಿಂಗಳ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮನೀಡಿದ ಘಟನೆ ನಡೆದಿದ್ದು, ಮಗು ಸಾವನ್ನಪ್ಪಿದೆ.
ರಿಕ್ಷಾದಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಆಕೆಯ ಸ್ಥಿತಿ ಹದಗೆಟ್ಟಾಗ ಪೊಲೀಸರು ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. ಸ್ಥಳೀಯ ಮಹಿಳೆಯರು ಆಕೆಯ ಸಹಾಯಕ್ಕೆ ಬಂದಿದ್ದು, ರಸ್ತೆಯಲ್ಲಿಯೇ ಅವಧಿ ಪೂರ್ವ ವಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. ಆಂಬ್ಯುಲೆನ್ಸ್ ಬರಲು ವಿಳಂಬವಾಗಿದ್ದು ಮಹಿಳೆಯನ್ನು ಆಸ್ಪತ್ರೆಗೆ ಕೆಲ ಹೊತ್ತಿನ ಬಳಿಕ ದಾಖಲಿಸಲಾಗಿದೆ.
ತನಿಖೆಗೆ ಆದೇಶ
ಘಟನೆ ಕುರಿತು ಪ್ರತಿಕ್ರಿಯಿಸಿದ ಯುಪಿ ಡಿಸಿಎಂ ಬ್ರಜೇಶ್ ಪಾಠಕ್, ನಾಲ್ಕೂವರೆ ತಿಂಗಳ ಗರ್ಭಿಣಿ ನೋವಿನಿಂದ ಬಳಲುತ್ತಿದ್ದಳು. ಆಕೆ ರಿಕ್ಷಾದಲ್ಲಿ ಅವಧಿಪೂರ್ವ ಮಗುವಿಗೆ ಜನ್ಮ ನೀಡಿದ್ದಾಳೆ. ನಾವು ಎಲ್ಲಾ ವೈದ್ಯಕೀಯ ಸಹಾಯವನ್ನು ನೀಡುತ್ತಿದ್ದೇವೆ. ಆಂಬ್ಯುಲೆನ್ಸ್ ಸಮಯಕ್ಕೆ ಸರಿಯಾಗಿ ಬಾರದಿರುವ ಬಗ್ಗೆ ತನಿಖೆಗೆ ಆದೇಶಿಸಿದ್ದೇವೆ. ನಿರ್ಲಕ್ಷ್ಯ ವಹಿಸಿದರೆ ಯಾರನ್ನೂ ಬಿಡುವುದಿಲ್ಲ” ಎಂದು ಹೇಳಿದ್ದಾರೆ.
ಗರ್ಭಧಾರಣೆಯಾದ 24 ವಾರಗಳೊಳಗೆ ಗರ್ಭಪಾತವಾದರೆ ಮಗು ಬದುಕುಳಿಯುವ ಸಾಧ್ಯತೆಗಳು ಇಲ್ಲ ಎಂದು ವೈದ್ಯರು ಹೇಳಿದ್ದಾರೆ.