ನವದೆಹಲಿ:ಪತ್ನಿಗೆ ಜೀವನಾಂಶ ಕೊಡುವಂತೆ ಕೋರ್ಟ್ ಆದೇಶ ನೀಡುವ ಸುದ್ದಿ ಎಲ್ಲರಿಗೂ ತಿಳಿದಿದೆ. ಆದರೆ ಉತ್ತರಪ್ರದೇಶದ ಮುಜಾಫರ್ ನಗರದ ಜಿಲ್ಲಾ ಕೋರ್ಟ್ ವಿಚ್ಛೇದನಗೊಂಡ ಪತಿಗೆ ಪತ್ನಿಯೇ ಪ್ರತಿ ತಿಂಗಳು ಜೀವನಾಂಶ ನೀಡಬೇಕೆಂದು ಆದೇಶ ನೀಡಿದೆ ಎಂದು ವರದಿ ತಿಳಿಸಿದೆ.
ಸ್ವಂತ ಚಹಾ ಅಂಗಡಿ ನಡೆಸುತ್ತಿದ್ದ 62ವರ್ಷದ ಕಿಶೋರಿ ಲಾಲ್ ಸೋಹಾನ್ಕರ್ ಅವರಿಗೆ ಖಾಯಂ ಆಗಿ ಯಾವುದೇ ಆದಾಯದ ಮೂಲಗಳಿಲ್ಲ. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಸೇನೆಯ ಕೆಲಸದಿಂದ ನಿವೃತ್ತಿಯಾಗಿರುವ ಪತ್ನಿ ಮುನ್ನಿ ದೇವಿ(58ವರ್ಷ) ಪತ್ರಿ ತಿಂಗಳು ಪತಿ(ವಿಚ್ಛೇದಿತ)ಗೆ 2000 ಸಾವಿರ ರೂಪಾಯಿ ಜೀವನಾಂಶ ಕೊಡುವಂತೆ ಕೋರ್ಟ್ ಆದೇಶ ನೀಡಿದೆ.
ಕಿಶೋರಿ ಲಾಲ್ ಸೋಹಾನ್ಕರ್ ಮುಜಾಫರ್ ನಗರದ ಖಾಟೌಲಿ ನಗರದಲ್ಲಿ ಚಹಾ ಅಂಗಡಿ ಇಟ್ಟುಕೊಂಡಿದ್ದರು. ಇವರ ಮಾಜಿ ಪತ್ನಿ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದು, ಇತ್ತೀಚೆಗೆ ನಿವೃತ್ತಿಯಾಗಿದ್ದರು. ಮುನ್ನಿ ದೇವಿಗೆ ತಿಂಗಳಿಗೆ 12 ಸಾವಿರ ರೂಪಾಯಿ ನಿವೃತ್ತಿ ವೇತನ ಬರುತ್ತಿತ್ತು.
ಇದನ್ನೂ ಓದಿ:ಐಫೋನ್-12 ಹಾಗೂ ಐಫೋನ್-12 ಪ್ರೋ ಮುಂಗಡ ಖರೀದಿ ಆರಂಭ: ಬೆಲೆ, ವಿಶೇಷತೆಗಳ ಮಾಹಿತಿ ಇಲ್ಲಿದೆ
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಪತಿ ಕಿಶೋರಿ ಲಾಲ್ ಸೋಹಾನ್ಕಾರ್, ಪ್ರಾಥಮಿಕವಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ತನ್ನ ಪತ್ನಿಯನ್ನು ಮನೆಗೆ ಕರೆದೊಯ್ಯಲು ನಿರ್ದೇಶನ ನೀಡಬೇಕೆಂದು ಕೋರಿ ಮನವಿ ಸಲ್ಲಿಸಿದ್ದರು.
ಆದರೆ ಪತ್ನಿ ಮುನ್ನಿ ದೇವಿ ಕಿಶೋರಿ ಲಾಲ್ ಜತೆ ವಾಸವಾಗಿರಲು ನಿರಾಕರಿಸಿದ್ದರು. ನಂತರ ಕಿಶೋರಿ ಲಾಲ್ ತನಗೆ ಪ್ರತಿ ತಿಂಗಳು ಜೀವನಾಂಶದ ಅಗತ್ಯವಿದೆ ಎಂದು ಕೋರ್ಟ್ ಮೆಟ್ಟಿಲೇರಿರುವುದಾಗಿ ವಕೀಲ ಬಿಕೆ ತಾಯಾಲ್ ತಿಳಿಸಿರುವುದಾಗಿ ವರದಿ ಹೇಳಿದೆ.